ಹುಬ್ಬಳ್ಳಿ: ಜಿಲ್ಲೆಯಲ್ಲಿ ಅಲ್ಪ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಆಗ್ರಹ ಮಾಡಲಾಗಿತ್ತು. ಆದರೆ ಕಾಂಗ್ರೆಸ್ ವರಿಷ್ಠರು ಟಿಕೆಟ್ ನೀಡದೆ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ತಾಫ್ ಕಿತ್ತೂರು ಆರೋಪಿಸಿದರು.
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಮೋಸ ಮಾಡಿರುವುದನ್ನು ಖಂಡಿಸಿ ಈ ಬಾರಿಯ ಚುನವಾಣೆಯಲ್ಲಿ ಹುಬ್ಬಳ್ಳಿ -ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಈ ನಿಟ್ಟಿನಲ್ಲಿ ನಾಮಪತ್ರ ಸಲ್ಲಿಸಲಾಗಿದೆ ಎಂದರು. ಹಿಂದೆ ಹು-ಧಾ ಪಶ್ಚಿಮ ಕ್ಷೇತ್ರದ ಆಕಾಂಕ್ಷಿಯಾಗಿದ್ದೆ. ಅಲ್ಲಿ ದೀಪಕ್ ಚಿಂಚೋರೆ, ಇಸ್ಮಾಯಿಲ್ ತಮಟಗಾರ ಅವರು ನನಗೆ ಟಿಕೆಟ್ ನೀಡಬಾರದು ಎಂದು ವರಿಷ್ಠರಿಗೆ ಬೆದರಿಕೆ ಹಾಕಿದ್ದರು. ಆದರಿಂದ ನನಗೆ ಟಿಕೆಟ್ ದೊರೆತಿಲ್ಲ ಎಂದು ದೂರಿದರು.
ಇದನ್ನೂ ಓದಿ: ಕೂಡಲಸಂಗಮಕ್ಕೆ ಕೈ ನಾಯಕ ರಾಹುಲ್ ಗಾಂಧಿ ಭೇಟಿ: ಸಿದ್ದರಾಮಯ್ಯ ಸಾಥ್
ಶಿಗ್ಗಾಂವಿಯಲ್ಲಿ ಮೊದಲು ಯೂಸೂಫ್ ಸವಣೂರು ಅವರಿಗೆ ಟಿಕಟ್ ನೀಡಿದ್ದರು. ಬಂಕಾಪುರ ಶಿಗ್ಗಾಂವಿ ಜನ ವಿರೋಧಿಸಿದ ನಂತರ ಕೇವಲ 24 ಗಂಟೆಗಳಲ್ಲಿ ಅಭ್ಯರ್ಥಿಯನ್ನು ಬದಲಾಯಿಸಿದರು. ಇದರಿಂದ ಹುಬ್ಬಳ್ಳಿ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅನ್ಯಾಯವಾಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದವರಿಗೆ ಮುಸ್ಲಿಂ ಸಮುದಾಯದವರು ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಈ ಬಾರಿ ಅದು ಬದಲಾಗಲಿದ್ದು, ಮುಸ್ಲಿಮರು ಕಾಂಗ್ರೆಸ್ಗೆ ಬುದ್ಧಿ ಕಲಿಸಲಿದ್ದಾರೆ ಎಂದು ಹರಿಹಾಯ್ದರು. ಎಲ್ಲ ಸಮಾಜದ ಮತದಾರರು ಸಹ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದ್ದು, ನಾನು ಸೆಂಟ್ರಲ್ ಕ್ಷೇತ್ರದಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ತೆಕ್ಕೆಗೆ ಬಿಜೆಪಿ ಬಂಡಾಯ ಅಭ್ಯರ್ಥಿ: ಜಾರಕಿಹೊಳಿ ಸಮ್ಮುಖದಲ್ಲಿ ಕೈ ಸೇರ್ಪಡೆ
ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಈಗಾಗಲೇ ಪಕ್ಷದ ವರಿಷ್ಠರು ಅಲ್ತಾಫ್ ಕಿತ್ತೂರು ಅವರ ಜೊತೆ ಮಾತನಾಡಿದ್ದಾರೆ. ನಾನು ಅವರ ಬಳಿ ಮಾತನಾಡಿ ಮನವೊಲಿಸುತ್ತೇನೆ. ಎಲ್ಲಾ ಸರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ಕೇಂದ್ರ ನಾಯಕರು ಜಗದೀಶ್ ಶೆಟ್ಟರ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ನನ್ನ ಜೊತೆ ಇರುವವರೆಗೂ ಮತ್ತು ಕಾಂಗ್ರೆಸ್ ಪಕ್ಷ ಶಕ್ತಿಯಾಗಿ ನಿಂತಿದೆ. ಅಲ್ಲಿಯವರೆಗೂ ನಮ್ಮನ್ನು ಯಾರಿಂದಲೂ ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ನನ್ನನ್ನು ಟಾರ್ಗೆಟ್ ಮಾಡುವರ ಬಗ್ಗೆ ನಾನು ಚಿಂತಿಸುವುದಿಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಆ ವಿಶ್ವಾಸದಿಂದ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಶೆಟ್ಟರ್ ಹೇಳಿದ್ರು.