ಹುಬ್ಬಳ್ಳಿ: ಲಾಕ್‌ಡೌನ್ ಘೋಷಣೆಯಾಗಿದ್ದ ದಿನದಿಂದ ಅವಳಿ ನಗರದಲ್ಲಿ ಬಂದ್ ಆಗಿದ್ದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಇದೀಗ ಪಾರ್ಸಲ್ ಸೌಲಭ್ಯ ಆರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ 3 ಹಾಗೂ ಧಾರವಾಡದಲ್ಲಿ 2 ಇಂದಿರಾ ಕ್ಯಾಂಟೀನ್ಗೆ ಅನುಮತಿ ನೀಡಲಾಗಿದೆ.
ಹುಬ್ಬಳ್ಳಿಯಲ್ಲಿ 7 ಮತ್ತು ಧಾರವಾಡದಲ್ಲಿ 2 ಇಂದಿರಾ ಕ್ಯಾಂಟೀನ್‌ಗಳಿದ್ದು, ಮೊದಲ ಹಂತದಲ್ಲಿ ಐದು ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ. ಹುಬ್ಬಳ್ಳಿಯಲ್ಲಿ ಕಿಮ್ಸ್, ಉಣಕಲ್ ಮತ್ತು ಹೊಸ ಬಸ್ ನಿಲ್ದಾಣ, ಧಾರವಾಡದಲ್ಲಿ ಬಸ್ ನಿಲ್ದಾಣ ಹಾಗೂ ಮಿನಿ ವಿಧಾನಸೌಧದ ಆವರಣದಲ್ಲಿರುವ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ.
ಲಾಕ್‌ಡೌನ್‌ನಲ್ಲೂ ನಗರಗಳ ಸ್ವಚ್ಛತೆಗೆ ಶ್ರಮಿಸುತ್ತಿರುವ ಮಹಾನಗರ ಪಾಲಿಕೆಯ 2,800 ಪೌರ ಕಾರ್ಮಿಕರಿಗೆ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಕ್ಯಾಂಟೀನ್‌ನಲ್ಲಿ ನಿತ್ಯ ಆಹಾರ ತಯಾರಿಸಲಾಗುತ್ತಿತ್ತು. ಈ ಕಾರ್ಯ ಕೂಡ ಮುಂದುವರಿಯಲಿದೆ.
ಕ್ಯಾಂಟೀನ್ ಆರಂಭವಾಗುವುದು ಬಹಳಷ್ಟು ಜನಕ್ಕೆ ಗೊತ್ತಿರದೇ ಇದ್ದರೂ ಮೊದಲ ದಿನ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದೆ. ಇದರಿಂದಾಗಿ ಕಿಮ್ಸ್‌ನಲ್ಲಿರುವ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಅಲ್ಲದೇ ಬೆಳಗ್ಗೆ 7 ಗಂಟೆಯಿಂದ 9ರ ತನಕ ಮತ್ತು ಮಧ್ಯಾಹ್ನ 12ರಿಂದ 2.30ರ ತನಕ ಪಾರ್ಸಲ್ ಕೊಡಲಾಗುತ್ತಿದೆ.
ಹಳೇ ಹುಬ್ಬಳ್ಳಿ ಮತ್ತು ಬೆಂಗೇರಿ ಭಾಗ ಕಂಟೇನ್‌ಮೆಂಟ್ ಪ್ರದೇಶವಾಗಿರುವ ಕಾರಣ ಅಲ್ಲಿ ಕ್ಯಾಂಟೀನ್‌ಗಳನ್ನು ತೆರೆಯಲು ಅವಕಾಶವಿಲ್ಲ. ಸರ್ಕಾರದ ನಿರ್ದೇಶನದ ಮೇರೆಗೆ ಹಂತಹಂತವಾಗಿ ಉಳಿದ ಕಡೆಯೂ ಆರಂಭಿಸಲು ಚಿಂತನೆ ನಡೆದಿದೆ.