ಹುಬ್ಬಳ್ಳಿ: ರಾಜ್ಯದಲ್ಲಿಯೇ ಎರಡನೇ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಹು - ಧಾ ಮಹಾನಗರ ಪಾಲಿಕೆ ಪಾತ್ರವಾಗಿದೆ. ಇಂತಹ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅರ್ಧದಷ್ಟೇ ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ ಅರ್ಧ ಕಾಮಗಾರಿಗೆ ಮಾತ್ರ ಮುಹೂರ್ತ ಕೂಡಿ ಬಂದಿಲ್ಲ. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ.
ಹುಬ್ಬಳ್ಳಿಯ ಹೃದಯ ಭಾಗವಾದ ಚನ್ನಮ್ಮನ ವೃತ್ತಕ್ಕೆ ಹೊಂದಿಕೊಂಡಂತಿರುವ ನೀಲಿಜಿನ್ ರಸ್ತೆಯ ಸ್ಥಿತಿ ತೀರಾ ಹದಗೆಟ್ಟಿದ್ದು, ಈ ರಸ್ತೆಯನ್ನು ಸಿಆರ್‌ಎಫ್‌ನಡಿ ಕಾಂಕ್ರೀಟ್ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಕಳೆದ ಡಿಸೆಂಬರ್‌ನಲ್ಲಿ ಚಾಲನೆ ನೀಡಲಾಗಿತ್ತು. ಇದರೊಂದಿಗೆ ಕಾಟನ್ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ ಮಾರ್ಗವಾಗಿ, ರೋಟರಿ ಶಾಲೆ ಹಾಗೂ ಒಳಭಾಗದ ಮೂರು ರಸ್ತೆಗಳೂ ಕಾಂಕ್ರೀಟ್ ಕಾಣಬೇಕಿತ್ತು. ಆದರೆ, ಕೆಲ ತಿಂಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ. ಈ ರಸ್ತೆ ಕಾಮಗಾರಿ ಇನ್ನೂ ಅರ್ಧವಷ್ಟೇ ಪೂರ್ಣಗೊಂಡಿದೆ.
ಆದರೆ, ಭಾರಿ ವಾಹನಗಳು ಸೇರಿದಂತೆ ವಿವಿಧ ವಾಹನಗಳ ಅಪಾಯಕಾರಿ ಓಡಾಟ ಆರಂಭವಾಗಿ ತಿಂಗಳುಗಳೇ ಕಳೆದಿವೆ. ಒಂದು ಬದಿಯಷ್ಟೇ ಸಂಚರಿಸುವ ವಾಹನಗಳು, ಸ್ವಲ್ಪ ಎಚ್ಚರ ತಪ್ಪಿದರೂ ಪಕ್ಕದ ಗುಂಡಿ ಪಾಲಾಗುತ್ತದೆ. ಮಳೆ ಬಂದರೆ ಕೆಸರಿನ ಗದ್ದೆಯಾಗುವ ಈ ರಸ್ತೆ, ಬಿಸಿಲಾದರೆ ಭಾರಿ ಧೂಳು ಮಯವಾಗುತ್ತದೆ.
ಒಂದೇ ಬದಿ ಮಾತ್ರ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆಯಲ್ಲೇ ವಾಹನಗಳು ಬಿಡುವಿಲ್ಲದಂತೆ ಓಡಾಡುತ್ತವೆ. ಉಳಿದ ಅರ್ಧ ಭಾಗ ಪಾದಚಾರಿಗಳ ಓಡಾಟ ಹಾಗೂ ವಾಹನಗಳ ಪಾರ್ಕಿಂಗ್‌ಗೆ ಮೀಸಲಾಗಿದೆ. ದಟ್ಟಣೆ ಹೆಚ್ಚಾಗಿರುವುದರಿಂದ ಸಣ್ಣಪುಟ್ಟ ಅಪಘಾತಗಳು ಮಾಮೂಲಾಗಿದೆ. ಹೀಗಾಗಿ ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.