ಹುಬ್ಬಳ್ಳಿ : ಬೆಂಗಳೂರಿನ ಜೈನ ಮಂದಿರ ಬ್ಯಾನರ್ ಪ್ರಕರಣದಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಮೇಲೆ ದೂರ ದಾಖಲಾಗಿದ್ದನ್ನು ಖಂಡಿಸಿ ಪ್ರಕರಣ ಹಿಂಪಡೆಯಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ಸಂಗ್ರಾಮ ಸೇನೆಯ ರಾಜ್ಯಾಧ್ಯಕ್ಷ ಸಂಜು ದುಮ್ಮಕನಾಳ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕರ್ನಾಟಕಕ್ಕೆ ಬಂದಿರುವ ವಲಸಿಗರು ಕನ್ನಡ ಭಾಷೆಯನ್ನು ಒಪ್ಪಿಕೊಳ್ಳದೇ ಹಿಂದಿ-ಇಂಗ್ಲೀಷ್ನಲ್ಲಿ ಬ್ಯಾನರ್ ಹಾಕಿಕೊಂಡು ಕನ್ನಡ ಭಾಷೆಗೆ ಅವಮಾನ ಮಾಡುತ್ತಿದ್ದಾರೆ. ಅಲ್ಲದೇ ಶೇ.70 ರಷ್ಟು ಬ್ಯಾನರ್ಗಳಲ್ಲಿ ಕನ್ನಡವಿರಬೇಕೆಂಬ ಕಾನೂನು ಇದೆ. ಆದರೆ ಇದನ್ನು ವಲಸಿಗರು ಗಾಳಿಗೆ ತೂರಿ ಮನಸೋಇಚ್ಛೆ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಕೂಡಲೇ ವಲಸಿಗರು ಕನ್ನಡ ಭಾಷೆ, ಇಲ್ಲಿನ ಸಂಸ್ಕೃತಿಯನ್ನು ಒಪ್ಪಿ, ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕನ್ನಡ ಪರ ಸಂಘಟನೆಗಳು ಸೇರಿಕೊಂಡು ವಲಸಿಗರಿಗೆ ಗುಲಾಬಿ ಹೂ, ಧಾರವಾಡ ಪೇಡಾ ನೀಡುವ ಮೂಲಕ ತಮ್ಮ ರಾಜ್ಯಕ್ಕೆ ಮರಳುವಂತೆ ಒತ್ತಾಯ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷ ಕುಬೇರ ಪವಾರ ಉಪಸ್ಥಿತದ್ದರು.