ಹುಬ್ಬಳ್ಳಿ: ನಗರದಲ್ಲಿರುವ ಹೋಟೆಲ್ ಹಾಗೂ ಖಾನಾವಳಿಗಳು ಗ್ರಾಹಕರಿಗೆ ಅಕ್ರಮ ಮದ್ಯ ಸರಬರಾಜು ಮಾಡುತ್ತಿವೆ ಎಂಬ ಮಾಹಿತಿಯ ಆಧಾರದ ಮೇಲೆ ಇಂದು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದರು.
ನಗರದಲ್ಲಿರುವ ಅನೇಕ ಹೋಟೆಲ್ ಮತ್ತು ಖಾನಾವಳಿಗಳು ಗ್ರಾಹಕರಿಗೆ ಅಕ್ರಮ ಮದ್ಯ ಸರಬರಾಜು ಮಾಡುತ್ತಿವೆ ಎಂಬ ಮಾಹಿತಿ ಅಬಕಾರಿ ಇಲಾಖೆಗೆ ಸಿಕಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೋಟೆಲ್ಗಳು ಮತ್ತು ಖಾನಾವಳಿಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದರು.
ಭೈರಿದೇವರಕೊಪ್ಪದ ಶರಣಪ್ಪ ಮಾಂಸದ ಹೋಟೆಲ್, ವಿದ್ಯಾನಗರದ ರೇಣುಕಾ ಹಾಗೂ ದುರ್ಗಾ ಸಾವಜಿ ಹೋಟೆಲ್, ವಿನ್ಟೇಜ್ ರೆಸ್ಟೋರೆಂಟ್, ನ್ಯೂ ಕಾಟನ್ ಮಾರುಕಟ್ಟೆ ಬಳಿಯ ಕಾಮತ್ ಫಿಶ್ ಲ್ಯಾಂಡ್, ಜೈ ಶ್ರೀಗಾಳಿದುರ್ಗಾ ಹೋಟೆಲ್, ನೆಹರೂ ಮೈದಾನದ ಬಳಿಯ ಸಾಗರ ಪ್ಯಾಲೇಸ್, ವಿಕ್ಟೋರಿಯಾ ರಸ್ತೆಯ ನ್ಯೂ ಆರಾಧನೆ, ರೇಣುಕಾ ಸಾವಜಿ ಹೋಟೆಲ್, ಕಮರಿಪೇಟೆಯ ಜಗದಾಂಬ, ಪೆಂಡಾರ ಓಣಿಯ ದೇವಿಕಾ, ಅಂಚಟಗೇರಿಯ ಕಿರಣ್, ಜಗದಾಂಬಾ, ರೇಣುಕಾ ಸಾವಜಿ ಖಾನಾವಳಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು.
ನಿಯಮ ಉಲ್ಲಂಘನೆ ಕಂಡು ಬಂದ ಹೋಟೆಲ್ ಮಾಲೀಕರ ಮೇಲೆ ಅಬಕಾರಿ ಕಾಯ್ದೆ ಕಲಂ 15(ಎ) ರ ಅಡಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಸಂಜೀವ್ ರೆಡ್ಡಿ, ಉಪ ನಿರೀಕ್ಷಕರುಗಳಾದ ದತ್ತಗುರು ಅಥಣಿ, ಬಾಬಾಸಾಬ ಲಡಗಿ, ಮಂಜುನಾಥ ಹಿರೇ ನಾಯ್ಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.