ETV Bharat / state

ವೈಯಕ್ತಿಕವಾಗಿ ನನಗೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ: ಸಂತೋಷ್​ ಲಾಡ್ - Janata Darshan programme

ಧಾರವಾಡ ಜಿಲ್ಲೆಯಲ್ಲಿ ಜನವರಿಯಿಂದ ತಾಲೂಕು ಮಟ್ಟದಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಚಿವ ಸಂತೋಷ್​ ಲಾಡ್ ಮಾಹಿತಿ ನೀಡಿದರು.

Santosh Lad
ಸಚಿವ ಸಂತೋಷ್​ ಲಾಡ್
author img

By ETV Bharat Karnataka Team

Published : Dec 24, 2023, 7:25 AM IST

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ್​ ಲಾಡ್

ಧಾರವಾಡ : ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಬೇಕು ಎಂದರೆ ಅವರದ್ದೇ ಆದ ವೈಯಕ್ತಿಕ ಹಿತಾಸಕ್ತಿ ಇರಬೇಕು. ಸಚಿವರು, ಶಾಸಕರು, ಸೋತ ಶಾಸಕರು ಅಥವಾ ಪ್ರಬಲ ಆಕಾಂಕ್ಷಿಗಳಲ್ಲಿ ಯಾರು ಗೆಲ್ಲುತ್ತಾರೋ ಅಂತವರನ್ನು ಪಕ್ಷ ಗುರುತಿಸಿ ಟಿಕೆಟ್ ಕೊಡುತ್ತದೆ ಎಂದು ಸಚಿವ ಸಂತೋಷ್​ ಲಾಡ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನನಗೆ ವೈಯಕ್ತಿಕವಾಗಿ ಲೋಕಸಭೆ ಚುನಾವಣೆಗೆ ನಿಲ್ಲಲು ಆಸಕ್ತಿ ಇಲ್ಲ. ಧಾರವಾಡ ಜಿಲ್ಲೆಯಲ್ಲಿ 15 ಜನ ಅಭ್ಯರ್ಥಿಗಳು ಅರ್ಜಿ ಕೊಟ್ಟಿದ್ದಾರೆ. ಯಾವ ಶಾಸಕರೂ ಅರ್ಜಿ ನೀಡಿಲ್ಲ, ಹೆಬ್ಬಾಳ್ಕರ್ ಅವರು ಇಲ್ಲಿಗೆ ಬಂದು ಅರ್ಜಿ ತೆಗೆದುಕೊಂಡು ಹೋಗಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಮತ್ತ್ಯಾರು ಅರ್ಜಿ ನೀಡಿದ್ದಾರೋ ಗೊತ್ತಿಲ್ಲ, ಬೇರೆ ಪಕ್ಷದಿಂದ ಬರುವವರೂ ಇರುತ್ತಾರೆ. ಎಷ್ಟು ಅರ್ಜಿಗಳು ಬಂದಿವೆ ಎಂಬುದನ್ನು ಪರಿಗಣಿಸುತ್ತೇವೆ. ಎಲ್ಲವನ್ನು ಪರಿಶೀಲಿಸಿ ಟಿಕೆಟ್ ನೀಡಲಾಗುತ್ತದೆ" ಎಂದರು.

ಮುನೇನಕೊಪ್ಪ ಕಾಂಗ್ರೆಸ್ ಸೇರುವ ವಿಚಾರಕ್ಕೆ ಮಾತನಾಡಿದ ಅವರು, ಮುನೇನಕೊಪ್ಪ ಅವರು ನೇರವಾಗಿ ನನ್ನ ಸಂಪರ್ಕದಲ್ಲಿಲ್ಲ, ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಮಾಹಿತಿ ಇದೆ. ಅವರು ಬಂದರೆ ಸ್ವಾಗತ ಮಾಡುತ್ತೇವೆ. ರಾಹುಲ್ ಗಾಂಧಿ ದೇಶದ ಎಲ್ಲ ಭಾಗದ ಯುವಕರ ಜೊತೆ ಸಂಪರ್ಕದಲ್ಲಿದ್ದಾರೆ. ಪಕ್ಷ ಗೆಲ್ಲಿಸಬೇಕು ಎಂಬ ಛಲ ಇದೆ. ನನ್ನ ಜೊತೆ ಮುಖಂಡರು, ಕಾರ್ಯಕರ್ತರು ಇದ್ದಾರೆ. ಕಳೆದ ಐದು ಬಾರಿ ಇಲ್ಲಿ ನಾವು ಸೋತಿದ್ದೇವೆ, ಈ ಬಾರಿ ಗಂಭೀರವಾಗಿ ಚುನಾವಣೆ ಮಾಡುತ್ತೇವೆ. ಒಗ್ಗಟ್ಟಿನಿಂದ ಇಲ್ಲಿ ಕೆಲಸ ಮಾಡುತ್ತೇವೆ, ಎಲ್ಲ ಸಮಾಜದವರು ಟಿಕೆಟ್ ಕೇಳುತ್ತಾರೆ. ಕೊನೆಗೆ ಯಾರಿಗೆ ಕೊಡಬೇಕು ಎಂಬುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ಹೇಳಿದರು.

ಸುವರ್ಣಸೌಧದ ಎದುರು ಮದ್ಯಪ್ರಿಯರಿಂದ ನಡೆದ ಪ್ರತಿಭಟನೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಅವರ ಬೇಡಿಕೆ ನ್ಯಾಯಯುತವಾದದ್ದು, ಮದ್ಯದ ಬಾಟಲಿ ಮೇಲೆ ಇನ್ಶೂರೆನ್ಸ್ ಮಾಡಿಸಬೇಕು ಎಂದಿದ್ದನ್ನು ಪರಿಗಣಿಸಬಹುದು. ಇನ್ಶೂರೆನ್ಸ್ ಮಾಡುವುದರಿಂದ ಎರಡೂ ಕಡೆ ಲಾಭ ಆಗುತ್ತದೆ. ಇದೊಂದು ಚರ್ಚೆ ಮಾಡುವಂತಹ ವಿಷಯ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಂಬಂಧಪಟ್ಟ ಇಲಾಖೆ ಜೊತೆಗೆ ಚರ್ಚೆ ನಡೆಯಲಿದೆ. ಇದೊಂದು ಒಳ್ಳೆಯ ಸಲಹೆ ಎಂದು ನಗುತ್ತಲೇ ಉತ್ತರ ಕೊಟ್ಟರು.

ಇದನ್ನೂ ಓದಿ : ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ: ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡ ಸಚಿವ ಸಂತೋಷ್ ಲಾಡ್

ಜನತಾ ದರ್ಶನ : ಜಿಲ್ಲಾಡಳಿತದಿಂದ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಸಂತೋಷ್​ ಲಾಡ್, ಜಿಲ್ಲಾಮಟ್ಟದ ಜನತಾದರ್ಶನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಸರ್ಕಾರದ ಹಂತದಲ್ಲಿ ಪರಿಹರಿಸಬೇಕಾದ ಮತ್ತು ಕೋರ್ಟ್ ಸಂಬಂಧಿ ಅಹವಾಲು ಹೊರತುಪಡಿಸಿ ಬಹುತೇಕ ಅಹವಾಲುಗಳನ್ನು ಸ್ಥಳೀಯವಾಗಿ ಪರಿಹರಿಸಲಾಗಿದೆ. ಬರುವ ಜನವರಿಯಿಂದ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕು ಹಂತದಲ್ಲಿ ಜನತಾ ದರ್ಶನ ಆಯೋಜಿಸಲಾಗುವುದು ಎಂದರು.

ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಳೆದ ಸೆಪ್ಟೆಂಬರ್​ಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮೂರು ಜನತಾ ದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಿ, ಸಾರ್ವಜನಿಕರಿಂದ ಸುಮಾರು 730 ಅಹವಾಲುಗಳನ್ನು ಸ್ವೀಕರಿಸಲಾಗಿತ್ತು. ಅದರಲ್ಲಿ 650 ಅಹವಾಲುಗಳನ್ನು ಇತ್ಯರ್ಥಡಿಸಲಾಗಿದೆ. ಉಳಿದ ಅರ್ಜಿಗಳನ್ನು ಪರಿಹರಿಸಲು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗಿದೆ. ಜಿಲ್ಲೆಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಯಶಸ್ವಿಯಾಗಿ ಜರುಗುತ್ತಿದ್ದು, ಸಮಸ್ಯೆ ಅಹವಾಲುಗಳ ಸಲ್ಲಿಕೆ ಕಡಿಮೆ ಆಗಿದೆ ಎಂದು ಹೇಳಿದರು.

ಹಿಂದೆಂದೂ ಕಾಣದ ಬರ ಪರಿಸ್ಥಿತಿ ರಾಜ್ಯದಲ್ಲಿ ಇದೆ. ಇದು ಮುಂದಿನ ಆರು ತಿಂಗಳಲ್ಲಿ ಇನ್ನೂ ತೀವ್ರವಾಗುವ ಸಂಭವವಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮುಂದಿನ ಆರು ತಿಂಗಳು ಕುಡಿಯುವ ನೀರು, ಮೇವು, ಉದ್ಯೋಗ ಸಮಸ್ಯೆ ಬರಬಹುದು. ಇದಕ್ಕೆ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಹೊಸ ಬೋರ್​ವೆಲ್ ಕೊರೆಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.