ಹುಬ್ಬಳ್ಳಿ: ಹೈದರಾಬಾದ್ ಪಶುವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿರುವ ಹಿನ್ನಲೆ ಹುಬ್ಬಳ್ಳಿಯಲ್ಲಿ ವಿವಿಧ ಸಂಘಟನೆಗಳಿಂದ ಸಂಭ್ರಮಾಚರಣೆ ನಡೆಯಿತು.
ಬಿಜೆಪಿ ಯುವ ಕಾರ್ಯಕರ್ತರಿಂದ ಸಂಭ್ರಮಾಚರಣೆ:
ಹು-ಧಾ ಮಹಾನಗರ ಬಿಜೆಪಿ ಯುವ ಕಾರ್ಯಕರ್ತರು ಹುಬ್ಬಳ್ಳಿ ಉಪನಗರ ಪೊಲೀಸ್ ಅಧಿಕಾರಿಗಳಿಗೆ ಸಿಹಿ ಹಂಚಿ ಪುಷ್ಪಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು.
ಬಳಿಕ ಯುವ ಮುಖಂಡ ಆರ್.ಲಕ್ಷ್ಮಣ ಮಾತನಾಡಿ, ದೇಶದಲ್ಲಿ ಇಂತಹ ಅಮಾನವೀಯ ಹಾಗೂ ಕ್ರೂರ ಕೃತ್ಯಗಳಿಗೆ ಕಡಿವಾಣ ಹಾಕಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೈಗೊಂಡಿರುವ ನಿರ್ಧಾರ ನಿಜಕ್ಕೂ ಜನರ ಸಂತೋಷವನ್ನು ಇಮ್ಮಡಿಗೊಳಿಸಿದೆ. ಅತ್ಯಾಚಾರ ಮಾಡಿ ಭಯವಿಲ್ಲದೆ ಓಡಾಡುತ್ತಿರುವ ಆರೋಪಿಗಳಿಗೆ, ನಮ್ಮ ಹುಬ್ಬಳ್ಳಿಯವರಾದ ಪೊಲೀಸ್ ಅಧಿಕಾರಿ ವಿಶ್ವನಾಥ ಸಜ್ಜನವರ ಮಾಡಿರುವ ಕಾರ್ಯ ಪಾಠವಾಗಲಿದೆ. ಇವರ ಈ ಕಾರ್ಯ ದೇಶವೇ ಹೆಮ್ಮೆ ಪಡುವಂತದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಜುನಾಥ ಹೆಬಸೂರ, ಲಕ್ಷ್ಮಣ, ಶಂಕರ, ಕಿರಣ, ಮಂಜುನಾಥ್, ಸಂತೋಷ ಸೇರಿದಂತೆ ಇತರರು ಇದ್ದರು.
ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ:
ಹು-ಧಾ ಮಹಾನಗರ ಮಹಿಳಾ ಕಾಂಗ್ರೆಸ್ ವತಿಯಿಂದ ದೀಪಾ ಗೌರಿ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಅಮಾನವೀಯ ಕೃತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಪಶುವೈದ್ಯೆಯನ್ನು ಅಮಾನವೀಯವಾಗಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಹಂತಕರನ್ನು ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನವರು ಎನ್‌ಕೌಂಟರ್ ಮಾಡಿರುವುದು ನಮ್ಮ ಹುಬ್ಬಳ್ಳಿಯ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ, ಎಂದು ನೂರಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ಎಬಿವಿಪಿಯಿಂದ ಸಂಭ್ರಮಾಚರಣೆ:
ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಸಂಭ್ರಮಾಚರಣೆ ನಡೆಯಿತು. ಹೈದರಾಬಾದ್ನಲ್ಲಿ ನಡೆದ ಅಮಾನವೀಯ ಕೃತ್ಯದ ಆರೋಪಿಗಳ ಎನ್‌ಕೌಂಟರ್ ಮಾಡುವ ಮೂಲಕ ಸರ್ಕಾರ ಪ್ರಜಾಪ್ರಭುತ್ವಕ್ಕೆ ಸೂಕ್ತ ಗೌರವವನ್ನು ನೀಡಿದೆ. ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡುವ ಮೂಲಕ ಸರ್ಕಾರ ಹೊಸ ನಿರ್ಧಾರವನ್ನು ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ. ಅಲ್ಲದೆ ನಮ್ಮ ಗಂಡು ಮೆಟ್ಟಿದ ನಾಡಿನ ಹುಬ್ಬಳ್ಳಿಯ ಹುಲಿ ವಿಶ್ವನಾಥ ಸಜ್ಜನವರ ಕಾರ್ಯ ಶ್ಲಾಘನೀಯ ಎಂದು ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳು ಪ್ರಶಂಸೆ ವ್ಯಕ್ತಪಡಿಸಿದರು.