ಹುಬ್ಬಳ್ಳಿ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದರೆ ಯಾವುದೇ ಆಸ್ಪತ್ರೆ ಅವರಿಗೆ ಹಣದ ಬೇಡಿಕೆ ಇಡಬಾರದು ಸರ್ಕಾರ ಆದೇಶ ಮಾಡಿದೆ. ಆದರೆ ಹುಬ್ಬಳ್ಳಿಯ ಆಸ್ಪತ್ರೆಯೊಂದು ಹಣ ಕಟ್ಟದ ಕಾರಣಕ್ಕೆ ಶವ ನೀಡಲು ಹಿಂದೇಟು ಹಾಕಿದ ಆರೋಪ ಕೇಳಿ ಬಂದಿದೆ.
ಹುಬ್ಬಳ್ಳಿ ಶಿರೂರ ಪಾರ್ಕ್ ರೋಡ್ನಲ್ಲಿರುವ ಸಂಜೀವಿನಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೇ 27ರಂದು ಆಸ್ಪತ್ರೆಗೆ ದಾಖಲಾಗಿದ್ದ ನಸೀಮಾಭಾನು ಜಮಿಲ್ ಅಹ್ಮದ ಶೇಖ್ ಎನ್ನುವವರು ನಿನ್ನೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ. ಆದರೆ ಅಷ್ಟರಲ್ಲಿಯೇ 2,27,250 ರೂಪಾಯಿ ಬಿಲ್ ಆಗಿದೆ. ಮೊದಲು ಕೊಟ್ಟಿದ್ದ 80 ಸಾವಿರ ರೂಪಾಯಿ ಮೈನಸ್ ಮಾಡಿದ್ರೂ 1,47,250 ರೂಪಾಯಿ ಕೊಟ್ಟರೆ ಮಾತ್ರ ಶವವನ್ನ ಕೊಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ ಎಂದು ಮೃತಳ ಕುಟುಂಬದವರು ವಿದ್ಯಾನಗರದ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಮಧ್ಯ ಪ್ರವೇಶ ಮಾಡಿದ ಪೊಲೀಸರು, ಶವವನ್ನು ಅಸ್ಪತ್ರೆ ಸಿಬ್ಬಂದಿಯಿಂದ ಬಿಡಿಸಿ ಸಂಬಂಧಿಗಳಿಗೆ ಒಪ್ಪಿಸಿ ಕಳುಹಿಸಿದ್ದಾರೆ.