ಹುಬ್ಬಳ್ಳಿ: ಮೀನಿನ ವಾಸನೆ ಹಾಗೂ ಅವ್ಯವಸ್ಥಿತ ಪರಿಸರದಿಂದ ಬೇಸತ್ತಿರುವ ಸಾರ್ವಜನಿಕರು ಗಣೇಶ ಪೇಟೆಯ ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಒತ್ತಾಯಿಸಿದ್ದಾರೆ.
ಗಣೇಶ ಪೇಟೆ, ಕುಲಕರ್ಣಿ ಹಕ್ಕಲ, ಗೂಡ್ ಶೆಡ್ ರೋಡ, ಬಿಂದರಗಿ ಓಣಿ, ಶೆಟ್ಟರ ಓಣಿ, ವಡ್ಡರ ಓಣಿ, ಬಾಕಳೆ ಗಲ್ಲಿ, ತಬೀಬ್ ಲ್ಯಾಂಡ್, ಮುಕ್ಕೇರಿ ಓಣಿ ಸೇರಿದಂತೆ ಬಹುತೇಕ ಸ್ಥಳೀಯ ನಿವಾಸಿಗಳು ಮೀನು ಮಾರುಕಟ್ಟೆ ಸ್ಥಳಾಂತರಕ್ಕೆ ಒತ್ತಾಯಿಸಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಮೀನು ಮಾರಾಟಗಾರರು ಅಂಗಡಿಗಳಲ್ಲಿ ಕುಳಿತುಕೊಂಡು ವ್ಯಾಪಾರ ಮಾಡುವುದಿಲ್ಲ. ಅವರೆಲ್ಲರೂ ರಸ್ತೆಗೆ ಬಂದು ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಮೀನಿನ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಕೆಟ್ಟ ವಾಸನೆ ಬರುತ್ತಿದೆ. ಇದರಿಂದ ಇಲ್ಲಿನ ನಿವಾಸಿಗಳು ತೊಂದರೆ ಎದುರಿಸುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಕೂಡಲೇ ಮೀನು ಮಾರುಕಟ್ಟೆ ಸ್ಥಳಾಂತರ ಮಾಡುವ ಮೂಲಕ ಸಾರ್ವಜನಿಕ ಹಿತಾಸಕ್ತಿ ಕಾಯಬೇಕು ಎಂದು ಸ್ಥಳೀಯರು ಮಹಾನಗರ ಪಾಲಿಕೆಗೆ ಒತ್ತಾಯಿಸಿದ್ದಾರೆ.