ಹುಬ್ಬಳ್ಳಿ : ಲೋಕಸಭೆ ಅಧಿವೇಶನವನ್ನು ಸೆ.14 ರಿಂದ ಅ.1ರವರೆಗೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹರಡಿರುವ ಈ ಸಂದರ್ಭದಲ್ಲಿ ವಿಶಿಷ್ಠ ಅಧಿವೇಶನ ನಡೆಸಲು ತೀರ್ಮಾನಿಸಿದ್ದೇವೆ. ರಾಜ್ಯಸಭೆ, ಲೋಕಸಭೆ ಎರಡೂ ಕಡೆಗೂ ಅಧಿವೇಶನ ನಡೆಸುತ್ತೇವೆ. ಪ್ರಶ್ನೋತ್ತರ ವೇಳೆಯನ್ನು ಒಂದು ಗಂಟೆಗೆ ನಿಗಧಿ ಮಾಡಿದ್ದು, ಅಧಿವೇಶನಕ್ಕೆ ತೃಣಮೂಲ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಆದರೆ, ಪಶ್ಚಿಮ ಬಂಗಾಳ, ರಾಜಸ್ಥಾನದಲ್ಲಿ ಒಂದೇ ಒಂದು ಅಧಿವೇಶನ ನಡೆಸಿ ಎಲ್ಲಾ ಬಿಲ್ ಪಾಸ್ ಮಾಡಲಾಗಿದೆ ಎಂದು ಜೋಶಿ ಆರೋಪಿಸಿದರು.
ಚೆನ್ನಮ್ಮ ವೃತ್ತಕ್ಕೆ ಫ್ಲೈಒವರ್ : ನಗರದ ಚೆನ್ನಮ್ಮ ವೃತ್ತದಲ್ಲಿ ಫ್ಲೈಒವರ್ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಮೊದಲ ಹಂತದಲ್ಲಿ 300 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿದ್ದೇವೆ. ಇದು ಭಾರತ ಸರ್ಕಾರಕ್ಕೆ ಸೇರಿದ ರಸ್ತೆ ಅಲ್ಲದಿದ್ರೂ ವಿಶೇಷ ಕಾಳಜಿ ಮೂಲಕ ಯೋಜನೆಗೆ ಆದೇಶಿಸಲಾಗಿದೆ. ಟ್ರಾಫಿಕ್ ಫ್ರೀ ಹುಬ್ಬಳ್ಳಿ-ಧಾರವಾಡ ನಗರವನ್ನಾಗಿ ಮಾಡುತ್ತಿದ್ದೇವೆ. ಇದಕ್ಕಾಗಿ ಒಟ್ಟು 600 ಕೋಟಿಯ ಯೋಜನೆ ರೂಪುಗೊಳುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಡ್ರಗ್ಸ್ ಪ್ರಕರಣ ಬೇಸರ ತಂದಿದೆ : ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಪ್ರಕರಣ ಅತ್ಯಂತ ಬೇಸರದ ಸಂಗತಿ. ಇದರಲ್ಲಿ ಕೆಲವು ಪ್ರಭಾವಿಗಳು ಇದ್ದಾರೆ ಎಂಬ ವದಂತಿ ಇದೆ. ಯಾರೇ ಇರಲಿ ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸುತ್ತೇನೆ. ಗೃಹ ಸಚಿವರಿಗೂ ಈ ಬಗ್ಗೆ ಮಾತನಾಡಿದ್ದೇನೆ. ಅಲ್ಲದೇ ಅವಳಿ ನಗರದ ಪೊಲೀಸ್ ಆಯುಕ್ತರಿಗೂ ಗಾಂಜಾ ಹಾಗೂ ಕ್ರೈಂ ಕಂಟ್ರೋಲ್ ಮಾಡಲು ಹೇಳಿದ್ದೇನೆ ಎಂದರು.