ಹುಬ್ಬಳ್ಳಿ (ಧಾರವಾಡ) : ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಗುರುವಾರದಂದು ಆಟೋ ಓಡಿಸಿಕೊಂಡಿದ್ದ ವ್ಯಕ್ತಿಯ ಕೊಲೆಯಾಗಿದೆ. ಪ್ರಕರಣದ ಹಿಂದೆ ಹತ್ತಾರು ಊಹಾಪೋಹಗಳು ಹರಿದಾಡುತ್ತಿವೆ. ಹುಬ್ಬಳ್ಳಿ ಪೊಲೀಸರು ಕೊಲೆ ಪ್ರಕರಣದ ಬೆನ್ನು ಹತ್ತಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂಗಿಯನ್ನು ಚುಡಾಯಿಸಿದ್ದಾನೆಂಬ ಕಾರಣಕ್ಕೆ ಆಕೆಯ ಅಣ್ಣಂದಿರು ವ್ಯಕ್ತಿಗೆ ಚಾಕುವಿನಿಂದ ಮನಬಂದಂತೆ ಇರಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಚಂದ್ರಶೇಖರ್ ಗುದ್ದಿ ಚಿಕಿತ್ಸೆ ಫಲಿಸದೇ ಕಿಮ್ಸ್ನಲ್ಲಿ ಮೃತಪಟ್ಟಿದ್ದಾರೆ.
ನೇಕಾರನಗರದ ಕಿರಣ ಭಜಂತ್ರಿ ಹಾಗೂ ಅಭಿಷೇಕ್ ಭಜಂತ್ರಿ ಎಂಬುವರ ಸಹೋದರಿಗೆ ಮೃತ ಚಂದ್ರಶೇಖರ್ ಕಳೆದ ಹಲವಾರು ದಿನಗಳಿಂದ ಫೋನ್ ಕರೆ ಮಾಡಿ ಪೀಡಿಸುತ್ತಿದ್ದ ಎನ್ನಲಾಗಿದೆ. ಆದ್ರೆ, ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯ ಹಿಂದೆ ಅಕ್ರಮ ಸಂಬಂಧದ ಆರೋಪ ಕೇಳಿ ಬರುತ್ತಿದೆ.
ಚಂದ್ರಶೇಖರ್ಗೆ ಎರಡು ವರ್ಷದ ಹಿಂದೆಯೇ ಮದುವೆಯಾಗಿದೆ. ಇನ್ನೂ ಕೊಲೆ ಮಾಡಿದ ಕಿರಣ್ ಮತ್ತು ಅಭಿಷೇಕ್ ತಂಗಿಗೂ ಸಹ ಮದುವೆಯಾಗಿದೆ. ಸದ್ಯ ಗಂಡನನ್ನು ಬಿಟ್ಟು ಬಂದು ಮನೆಯಲ್ಲಿದ್ದಾರೆ. ಈಕೆಯ ಜೊತೆಗೆ ಆಟೋ ಚಾಲಕ ಚಂದ್ರು ಅಕ್ರಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕಾಗಿ, ಅಣ್ಣಂದಿರಿಬ್ಬರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಯುವತಿಗೆ ಚುಡಾಯಿಸಿದ ಯುವಕನಿಗೆ ಸಹೋದರರಿಂದ ಚಾಕು ಇರಿತ
ಆದ್ರೆ, ಈ ಆರೋಪವನ್ನು ಮೃತರ ಕುಟುಂಬಸ್ಥರು ತಳ್ಳಿ ಹಾಕಿದ್ದಾರೆ. ವೈಯಕ್ತಿಕ ದ್ವೇಷಕ್ಕೆ ಈ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣದ ಬೆನ್ನು ಹತ್ತಿರುವ ಖಾಕಿಪಡೆ ಈಗಾಗಲೇ ಆರೋಪಿಗಳಾದ ಕಿರಣ್ ಮತ್ತು ಅಭಿಷೇಕ್‌ನನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.