ಹುಬ್ಬಳ್ಳಿ: ಲಾಕ್ಡೌನ್ ವೇಳೆ ತಮ್ಮ ನಗರದ ಸೌಂದರ್ಯವನ್ನು ಕಾಣುವ ಮಹದಾಸೆ ಹೊಂದಿದ್ದ ಯುವಕರ ತಂಡವೊಂದು ಅವಳಿ ನಗರದ ತಾಣಗಳನ್ನು ಡ್ರೋನ್ ಕ್ಯಾಮರಾದಲ್ಲಿ ಸೆರೆ ಹಿಡಿದು ಯೂಟ್ಯೂಬ್ನಲ್ಲಿ ಹರಿಬಿಟ್ಟಿದ್ದು ಸಖತ್ ವೈರಲ್ ಆಗಿದೆ.
ಲಾಕ್ಡೌನ್ ವೇಳೆ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ನೀರವ ಮೌನ ಆವರಿಸಿತ್ತು. ಜನಜಂಗುಳಿ, ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ರಸ್ತೆಗಳೆಲ್ಲಾ ಭಣಗುಡುತ್ತಿದ್ರೆ, ದೊಡ್ಡ ದೊಡ್ಡ ಕಟ್ಟಡಗಳು ನಿರಾಭರಣ ಸುಂದರಿಯಂತೆ ಕಾಣುತ್ತಿರುವುದನ್ನು ಸೆರೆ ಹಿಡಿಯಲಾಗಿದೆ.
- " class="align-text-top noRightClick twitterSection" data="">
ಅಂದಹಾಗೆ ಈ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದವರು ವೃತ್ತಿಪರ ಛಾಯಾಗ್ರಾಹಕರಲ್ಲ. ಜೆಎಸ್ಎಸ್ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ವಿನಾಯಕ ಹುಲಹಳ್ಳಿ, ವಿನಯಕುಮಾರ ಪತ್ತಾರ ಮತ್ತು ನಿಶ್ಚಲ ಮುದ್ದಣ್ಣವರ್ ಹಾಗೂ ಪಿಸಿ ಜಾಬೀನ ಕಾಲೇಜಿನ ಬಿಸಿಎ ವಿದ್ಯಾರ್ಥಿ ಸಂತೋಷ ಕೊರಿಶೆಟ್ಟರ್.
ಹುಬ್ಬಳ್ಳಿ-ಧಾರವಾಡ ಪ್ರತಿನಿಧಿಸುವ ಪ್ರಮುಖ ಸ್ಥಳ, ರಸ್ತೆ, ಸ್ಮಾರಕ, ಪ್ರತಿಮೆ, ಕಾಲೇಜು, ಮೈದಾನ, ರೈಲು ನಿಲ್ದಾಣ, ಕೆರೆಗಳ ದೃಶ್ಯಗಳನ್ನು ಸೆರೆ ಹಿಡಿದಿದ್ದು ಕಣ್ಣಿಗೆ ರಸದೌತಣ ನೀಡುತ್ತವೆ. ಯುವಕರು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಅನುಮತಿ ಪಡೆದು ಮೂರು ದಿನಗಳಲ್ಲಿ ಬೈಕ್ನಲ್ಲಿ ಸುತ್ತಾಡಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಸುಮಾರು 4.54 ನಿಮಿಷದ ಈ ವಿಡಿಯೋವನ್ನು ನೋಡಿದ ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವಳಿ ನಗರದ ಪಕ್ಷಿನೋಟದಂತಿರುವ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ನೋಡಿ ಮೆಚ್ಚಿಕೊಂಡಿದ್ದು, ಯುವಕರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ.