ಹುಬ್ಬಳ್ಳಿ: ಅಮರಗೋಳದ ಎಪಿಎಂಸಿ ಮಹಾದ್ವಾರದ ಬಳಿ ಸೋಂಕು ನಿವಾರಕ ಸುರಂಗ ನಿರ್ಮಿಸಲಾಗಿದ್ದು, ರಾಜ್ಯದಲ್ಲಿಯೇ ಇದೊಂದು ವಿನೂತನ ಪ್ರಯತ್ನವಾಗಿದೆ.
ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಸ್ಥಳೀಯ ಯಂಗ್ ಇಂಡಿಯಾ ( ವೈಐ) ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ( ಸಿಐಐ) ಸಹಯೋಗದಲ್ಲಿ ಇದನ್ನು ನಿರ್ಮಿಸಿದೆ.
ತಮಿಳುನಾಡಿನ ತಿರುಪ್ಪೂರನಲ್ಲಿ ಅಲ್ಲಿನ ಯಂಗ್ ಇಂಡಿಯಾ ಸಂಸ್ಥೆ ಇಂತಹ ಪ್ರಯತ್ನ ಮಾಡಿರುವದನ್ನು ಕಂಡು, ಹುಬ್ಬಳ್ಳಿಯಲ್ಲಿಯೂ ಅದನ್ನು ಅನುಷ್ಠಾನಗೊಳಿಸುವ ಆಸಕ್ತಿ ಉಂಟಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಅಗತ್ಯ ಸಹಕಾರ ನೀಡಲು ಮುಂದಾದಾಗ ನಮ್ಮ ಉತ್ಸಾಹಕ್ಕೆ ಪ್ರೋತ್ಸಾಹ ದೊರೆಯಿತು. ಪಾರಾದಿ ಅವರಿಂದ ಸ್ಟೀಲ್ ಫ್ರೇಮ್ ಸಿದ್ಧಪಡಿಸಿ, ಹೈ ಪ್ರೆಶರ್ ಉಳ್ಳ ಫಾಗರ್ಸ್, 1 ಅಶ್ವಶಕ್ತಿಯ ಪಂಪ್ ಅಳವಡಿಸಲಾಗಿದೆ.
ಸುರಂಗದ 4 ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್ ಮೂಲಕ ಕಾರ್ಯ ಆರಂಭವಾಗುತ್ತದೆ. ಮನುಷ್ಯ ನೆನೆಯದ ಹಾಗೆ ಸೋಂಕು ನಿವಾರಕ ಸಿಂಪಡಣೆಯಾಗುತ್ತದೆ. ಶೇ.1 ರ ಸೋಡಿಯಂ ಹೈಪೋಕ್ಲೋರೈಟ್ ಮಿಶ್ರಿತ ದ್ರಾವಣವನ್ನು ಮಹಾನಗರಪಾಲಿಕೆ ನಿರಂತರವಾಗಿ ಒದಗಿಸಲಿದೆ. ಯಂಗ್ ಇಂಡಿಯಾ ಮತ್ತು ಸಿಐಐ ಒಂದು ಲಕ್ಷ ರೂ.ವೆಚ್ಚದಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ಕೈಗೊಂಡಿದೆ ಎಂದು ಯಂಗ್ ಇಂಡಿಯಾ ಸಂಸ್ಥೆ ಅಧ್ಯಕ್ಷ ಡಾ.ಶ್ರೀನಿವಾಸ ಜೋಷಿ ವಿವರಿಸಿದರು.
ಮಹಾನಗರಪಾಲಿಕೆ ಆಯುಕ್ತ ಮಾತನಾಡಿ, ಹುಬ್ಬಳ್ಳಿ ಎಪಿಎಂಸಿಗೆ ಪ್ರತಿನಿತ್ಯ ಸಾವಿರಾರು ರೈತರು,ವ್ಯಾಪಾರಿಗಳಿಗೆ ಸೋಂಕು ಹರಡುವಿಕೆ ತಡೆಯಲು ಈ ಪ್ರಯತ್ನ ಮಾಡಲಾಗಿದೆ,ಸಾರ್ವಜನಿಕರು ಸ್ವಲ್ಪ ತಾಳ್ಮೆಯಿಂದ ವಾಹನದಿಂದ ಇಳಿದು, ಸುರಂಗದಲ್ಲಿ ಒಮ್ಮೆ ಹಾಯ್ದು ಬರುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು ಎಂದರು.