ಹುಬ್ಬಳ್ಳಿ: ಹೋಳಿ ಹಬ್ಬ ಬಂತಂದ್ರೆ ಸಾಕು, ವಾಣಿಜ್ಯ ನಗರಿ ಬೀದಿ ಬೀದಿಗಳಲ್ಲಿ ತಮಟೆ ಹಾಗೂ ಹಲಗೆ ಸದ್ದು ರಿಂಗಣಿಸುತ್ತದೆ. ಹುಬ್ಬಳ್ಳಿಯಲ್ಲಿ ರಂಗಪಂಚಮಿಗೆ ಇನ್ನೂ ಒಂದು ವಾರ ಬಾಕಿ ಇದೆ. ಅದಕ್ಕೂ ಮುನ್ನವೇ ವಾಣಿಜ್ಯನಗರಿಯಲ್ಲಿ ರಂಗ ಪಂಚಮಿ ರಂಗೇರುತ್ತಿದೆ. ಪಂಚಮಿ ಅಂತೆಯೇ ಹುಬ್ಬಳ್ಳಿ ಮಾರುಕಟ್ಟೆಗೆ ಹಲಗೆಗಳು ಲಗ್ಗೆ ಇಟ್ಟಿವೆ, ಹಲಗೆ ಸದ್ದು ಮಾರ್ದನಿಸುತ್ತಿದೆ. ಬಾಗಲಕೋಟೆ, ಬೆಳಗಾವಿ, ವಿಜಯಪುರ ಬಿಟ್ಟರೆ ಹೋಳಿಯ ರಂಗು ನೋಡಬೇಕೆಂದರೆ ಅದು ಹುಬ್ಬಳ್ಳಿಯಲ್ಲಿ ಮಾತ್ರ. ರಂಗಿನಾಟದ ಹೋಳಿ ಹುಣ್ಣಿಮೆ ಪ್ರಮುಖ ಆಕರ್ಷಣೆಯೇ ಹಲಗೆ. ಹೀಗಾಗಿ ಹಲಗೆಗಳಿಗೆ ಭಾರಿ ಬೇಡಿಕೆ ಬಂದಿದೆ. ಗ್ರಾಹಕರು ವಿವಿಧ ಬಗೆಯ ಹಲಗೆಗಳನ್ನು ಖರೀದಿಸಲು ಜನ ಮುಗಿಬೀಳುತ್ತಿದ್ದಾರೆ.
ನಗರದ ಹಲವೆಡೆ ಹಲಗೆಗಳ ಮಾರಾಟ ಜೋರು.. ಹಿಂದಿನಿಂದಲೂ ಚರ್ಮದ ಹಲಗೆಗೆ ಬೇಡಿಕೆ ಹೆಚ್ಚು. ಫೈಬರ್, ಪ್ಲಾಸ್ಟಿಕ್ ತಮಟೆಗಳು ಕೂಡ ಇತ್ತೀಚೆಗೆ ಬೇಡಿಕೆ ಹೆಚ್ಚಿಸಿಕೊಂಡಿವೆ. ಹೋಳಿ ಹುಣ್ಣಿಮೆಯಾಗಿ ಐದನೇ ದಿನ ಹುಬ್ಬಳ್ಳಿಯಲ್ಲಿ ರಂಗ ಪಂಚಮಿ ನಡೆಯುತ್ತದೆ. ಈಗಾಗಲೇ ನಗರದ ಸಾಯಿಬಾಬಾ ಮಂದಿರ, ದುರ್ಗದ ಬಯಲು, ಜನತಾ ಬಜಾರ್ ಸೇರಿದಂತೆ ಹಲವೆಡೆ ತರಹೇವಾರಿ ಹಲಗೆಗಳು ಮಾರಾಟ ಹೆಚ್ಚಾಗಿವೆ. ಜನರು ಕೂಡ ಬಂದು ಈಗಾಗಲೇ ಹಲಗೆಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.
ಹಬ್ಬದ ಸಂಭ್ರಮ ಇಮ್ಮಡಿಗೊಳಿಸುವ ಹಲಗೆಗಳ ಮಾರಾಟ ಕೂಡ ಜೋರಾಗಿ ನಡೆಯುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ಬೇಡಿಕೆ ಹೆಚ್ಚಿದೆ. ಹುಬ್ಬಳ್ಳಿ - ಧಾರವಾಡ ಅಲ್ಲದೆ ವಿಜಯಪುರ, ಬಾಗಲಕೋಟಿ ಸೇರಿದಂತೆ ಹಲವು ಜಿಲ್ಲೆಗಳಿಂದ ಜನರು ಬಂದು ಹಲಗೆ ಖರೀದಿಸುತ್ತಿದ್ದಾರೆ. ಇದರಿಂದಾಗಿ ಮಾರಾಟಗಾರರು ಹರ್ಷಗೊಂಡಿದ್ದು, ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಸರ್ವಧರ್ಮದ ಪ್ರತೀಕ.. ಹುಬ್ಬಳ್ಳಿ ಹೋಳಿ ಸರ್ವಧರ್ಮದ ಪ್ರತೀಕವಾಗಿದೆ. ಎಲ್ಲಾ ಸಮುದಾಯವರು ರಂಗಪಂಚಮಿ ದಿನ ತಮ್ಮ ತಮ್ಮ ಓಣಿಗಳಲ್ಲಿ ಬಣ್ಣ ಎರಚಿಕೊಂಡು ಸಂಭ್ರಮಿಸುತ್ತಾರೆ. ಚಿಣ್ಣರು ಬಲೂನು, ಪ್ಲಾಸ್ಟಿಕ್ ಕವರ್ ಹಾಗೂ ಪಿಚಕಾರಿಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಸ್ನೇಹಿತರಿಗೆ, ಬೈಕ್‌ಗಳ ಮೇಲೆ ಹೋಗುವವರ ಮೇಲೆ ಎರಚಿ ಕುಣಿದು ಕುಪ್ಪಳಿಸುತ್ತಾರೆ.
ಮೇದಾರ ಓಣಿಯ ಹೋಳಿ ಮೆರಗು ಹೆಚ್ಚು.. ಇನ್ನು, ಹೋಳಿ ಆಚರಣೆಗೆ ಮೆರಗು ನೀಡುವುದು ಹೊಸ ಮೇದಾರ ಓಣಿಯಲ್ಲಿನ ಹೋಳಿ ಕಾಮಣ್ಣ. ಮೇದಾರ ಸಮುದಾಯದಿಂದ ಪ್ರತಿಷ್ಟಾಪನೆ ಮಾಡಿರುವ ಹೋಳಿ ಕಾಮಣ್ಣ ಸಾಕಷ್ಟು ವೈಭವದಿಂದ ಕೂಡಿರುತ್ತದೆ. ಎಲ್ಲಾ ಕಡೆ ಚಿಕ್ಕ ಪುಟ್ಟದಾದ ಕಾಮಣ್ಣನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವುದನ್ನು ನೋಡಬಹುದು. ಎಲ್ಲಾ ಕಡೆ ಸಣ್ಣ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದರೆ, ಮೇದಾರ ಓಣಿಯಲ್ಲಿ ಬೃಹತ್ ಆಕಾರದ ಹೋಳಿ ಕಾಮಣ್ಣನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಯುವಕರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ಇದರಲ್ಲಿ ಪಾಲ್ಗೊಳ್ಳುತ್ತಾರೆ.
ಸುಮಾರು ಒಂದು ತಿಂಗಳಿನಿಂದಲೇ ಹೋಳಿ ಕಾಮಣ್ಣನ ಸ್ಥಾಪನೆಗೆ ಸಿದ್ಧತೆ ನಡೆಸಲಾಗುತ್ತದೆ. ಬಿದಿರಿನ ಕಡ್ಡಿಯಿಂದ ಬೃಹತ್ ಗಾತ್ರದ ಕಾಮಣ್ಣನ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಹೊಸ ಮೇದಾರ ಓಣಿಯಲ್ಲಿ ಕಾಮಣ್ಣನ ಪ್ರತಿಷ್ಠಾಪನೆ ಮಾಡಿ ವಿಶೇಷವಾಗಿ ಪೂಜೆ ಸಲ್ಲಿಸಿ ಹುಣ್ಣಿಮೆ ಮುಗಿದ ಐದು ದಿನಗಳ ಬಳಿಕ ರಂಗಪಂಚಮಿಯಂದು ದಹನ ಮಾಡುವ ಮೂಲಕ ಆಚರಿಸಲಾಗುತ್ತದೆ.
ಹೊಸ ಮೇದಾರ ಓಣಿಯಲ್ಲಿರುವ ಕಾಮಣ್ಣ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಆರಾಧ್ಯದೈವವಾಗಿದ್ದು, ಭಕ್ತರು ಹಲವಾರು ಹರಕೆ ಕಟ್ಟಿಕೊಂಡು ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ಸಂಪ್ರದಾಯವಾಗಿದೆ.
ಇದನ್ನೂ ಓದಿ: ಈ ಬಾರಿಯ ಹೋಳಿ ಕಾಮ ದಹನಕ್ಕೆ ಶುಭ ಮೂಹೂರ್ತ ಯಾವುದು ಗೊತ್ತಾ..?