ಧಾರವಾಡ: ಜಿಲ್ಲೆಯಲ್ಲಿ ಮಳೆಯ ರುದ್ರ ನರ್ತನ ಮುಂದುವರೆದಿದ್ದು, ಮಳೆಯಿಂದ ಹೊಟ್ಟೆಪಾಡಿಗಾಗಿ ಊರು ಬಿಟ್ಟು ಬಂದವರ ಕಥೆ ಮಾತ್ರ ಹೇಳತೀರದಾಗಿದೆ.
ಜಿಲ್ಲೆಯ ಹನಸಿ ಗ್ರಾಮದಿಂದ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮಕ್ಕೆ ಕುರಿ ಮೇಯಿಸಲು ಬಂದಿದ್ದ ಮೂರು ಕುರಿಗಾಹಿಗಳ ಕುಟುಂಬದವರು ಬ್ಯಾಲ್ಯಾಳ ಶಾಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಜೀವ ಉಳಿಸಿಕೊಂಡು ಹೇಗೋ ಬ್ಯಾಲ್ಯಾಳ ಶಾಲೆ ಸೇರಿದ ಕುರಿಗಾಹಿ ಕುಟುಂಬಗಳು, ಅತ್ತ ಊರಿಗೆ ಹಿಂದಿರುಗಲು ಆಗದೆ, ಇತ್ತ ತಿನ್ನಲೂ ಏನು ಇಲ್ಲದೆ ಪರದಾಡುವಂತಾಗಿದೆ.
ಈಗಾಗಲೇ 20 ಕುರಿಗಳು ಹೊಟ್ಟೆಗೆ ತಿನ್ನಲು ಏನೂ ಸಿಗದ ಕಾರಣ ಸಾವನ್ನಪ್ಪಿದ್ದು, ಮಳೆಗೆ ಇನ್ನೂ ಹೆಚ್ಚು ಕುರಿ ಸಾಯಬಹುದು ಎಂದು ಕುರಿಗಾಹಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕುರಿಗಾಹಿಗಳು ಶಾಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದು, ಕುರಿಗಳು ಸಹ ಅಲ್ಲೇ ಇವೆ. ಆದರೆ ತಿನ್ನಲು ಏನೂ ಸಿಗದ ಕಾರಣ ಕುರಿಗಾಹಿಗಳು ಬ್ಯಾಲ್ಯಾಳ ಗ್ರಾಮದ ಮನೆ ಮನೆಗೆ ಬಂದು ಊಟ ಪಡೆದುಕೊಂಡು ಹೋಗುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.