ಹುಬ್ಬಳ್ಳಿ: ದೇವೇಗೌಡರ ಕುಟುಂಬ ಮುಗಿಸಲು ಶಕುನಿಗಳು ಪ್ರಯತ್ನಿಸುತ್ತಿದ್ದಾರೆ. ಪಕ್ಷದವರಿಗೆ ಯಾರು ತಲೆ ಕೆಡಿಸುತ್ತಾರೆ ಅನ್ನೋ ಮಾಹಿತಿ ನನಗಿಲ್ವಾ ಎಂದು ಭವಾನಿ ರೇವಣ್ಣ ಟಿಕೆಟ್ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ಚಾಮಿ ಮಾತನಾಡಿದ್ದಾರೆ. ನಗರದಲ್ಲಿ ಇಂದು ಮಾತನಾಡಿದ ಅವರು, ರಾಜಕಾರಣದಲ್ಲಿ ಕುರುಕ್ಷೇತ್ರ ನಡೀತಿದೆ. ನಾನು ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ನನಗೂ ಶಕುನಿಗಳು ಯಾರ ಅನ್ನೋ ಮಾಹಿತಿ ಬರುತ್ತೆ ಎಂದು ಹೇಳಿದರು.
ಹಾಸನ ಕ್ಷೇತ್ರದದಿಂದ ಭವಾನಿ ರೇವಣ್ಣ ಸ್ಪರ್ಧೆ ಮಾಡಿದ್ರೆ ಗೆಲ್ಲಲ್ವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಕಾರಣಕ್ಕೂ ಸಾಧ್ಯ ಇಲ್ಲ. ಒಂದು ವೇಳೆ ಟಿಕೆಟ್ ನೀಡಿದರೂ ಪಕ್ಷದಲ್ಲಿ ಕಾರ್ಯಕರ್ತರು ಇದ್ದರೂ, ಕುಟುಂಬಕ್ಕೆ ಮತ್ತೊಂದು ಟಿಕೆಟ್ ನೀಡಿದ್ದಾರೆ ಎಂಬ ಮಾತುಗಳು ಬರುತ್ತವೆ ಎಂದರು. ಬಳಿಕ ಪ್ರಚಾರದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ನಮಗೆ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರಾಗಿದ್ದಾರೆ. ಟಿಕೆಟ್ ಘೋಷಣೆ ಆದ ಮೇಲೆ ನಮ್ಮ ಪಕ್ಷಕ್ಕೆ ಬೇರೆ ಪಕ್ಷದವರು ಸೇರ್ಪಡೆಗೊಳ್ಳಬಹುದು ಎಂದರು. ಚುನಾವಣೆ ಪ್ರಚಾರ ಸಮೀಪಕ್ಕೆ ನಾವೆಲ್ಲ ಬಂದಿದ್ದೇವೆ. ನಾನು ನಿರಂತರವಾಗಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತ ಒಂದು ಕಡೆ ಪಂಚ ರತ್ನ ಯಾತ್ರೆ ಯೋಜನೆಗಳ ಮಾಹಿತಿ ನೀಡುತ್ತಿದ್ದೇವೆ ಎಂದರು.
ಬಿಜೆಪಿಯಿಂದ ಜೆಡಿಎಸ್ಗೆ ಸೇರ್ಪಡೆಗೊಂಡಿದ್ದ ವೀರಭದ್ರಪ್ಪ ಹಾಲರವಿ ಪರ ಸಭೆ ಮಾಡಲಿದ್ದೇನೆ. ನಂತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸೋ ಕಾರ್ಯಕ್ರಮದಲ್ಲಿ ಭಾಗಿಯಾಗ್ತೀನಿ. ಮುಂದಿನ ತಿಂಗಳು 14 ರಂದು ಪಕ್ಷಕ್ಕೆ ಬಹಳ ಜನ ಸೇರ್ಪಡೆಗೊಳ್ಳಲಿದ್ದಾರೆ ಎಂದು ಇದೇ ವೇಳೆ ಮಾಜಿ ಸಿಎಂ ಹೇಳಿದರು.
ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮಯದ ಅಭಾವ, ಸಣ್ಣಪುಟ್ಡ ಸಮಸ್ಯೆ ಬಗೆಹರಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಪ್ರತಿಯೊಂದನ್ನೂ ನಾನೇ ತೀರ್ಮಾನ ಮಾಡಬೇಕಿದೆ. ಅಲ್ಲದೇ ಕೆಲವು ಕ್ಷೇತ್ರಗಳಿಂದ ಪ್ರಥಮ ಹಂತದ ಮಾಹಿತಿ ಪಡೆಯಲಾಗುತ್ತಿದೆ. ಇದಾದ ನಂತರ ಎಲ್ಲ ತೀರ್ಮಾನ ಮಾಡುತ್ತೇವೆ ಎಂದರು. ಕರಡಿ ಸಂಗಣ್ಣ ಪಕ್ಷ ಸೇರೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಇನ್ನು ಚರ್ಚೆಯಾಗಿಲ್ಲ ಎಂದು ಹೇಳಿದರು. ಈ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನ ಅಧಿಕಾರಕ್ಕೆ ತರಲು ಪ್ರಯತ್ನ ಮಾಡುತ್ತೇನೆ. ಎಲ್ಲವನ್ನೂ ಕಾಲವೇ ನಿರ್ಣಯ ಮಾಡಲಿದೆ ಎಂದರು. ಎರಡು ಕಡೆ ಸ್ಪರ್ಧೆ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆಯೂ ಪ್ರತಿಕ್ರಿಯೆ ನೀಡಿದ ಅವರು, ಆ ಪ್ರಶ್ನೆಯೇ ಈಗ ಉದ್ಬವಿಸಲ್ಲ ಎಂದರು.
ಇನ್ನು ಹೆಚ್ಡಿಕೆ ನಗರದ ಹಲವು ದೇವಾಲಯ, ದರ್ಗಾಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಹುಬ್ಬಳ್ಳಿಯ ಆರಾಧ್ಯದೈವ ಸಿದ್ಧಾರೂಢ ಸ್ವಾಮಿ ಮಠಕ್ಕೆ ಭೇಟಿ ನೀಡಿದ ಅವರು, ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದರು. ಬಳಿಕ ಹಳೇ ಹುಬ್ಬಳ್ಳಿಯ ಸಯ್ಯದ್ ಫತೇಷಾ ವಲಿ ದರ್ಗಾ, ದಾಜೀಬಾನಪೇಟ ತುಳಜಾಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: ಈ ಬಾರಿ ಜೆಡಿಎಸ್ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ: ಹೆಚ್ಡಿಕೆ ವಿಶ್ವಾಸ