ಹುಬ್ಬಳ್ಳಿ: ಸಂಪುಟದಲ್ಲಿ ಸ್ಥಾನ ಸಿಗದೇ ಇದ್ದಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸಿಡಿಮಿಡಿಗೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ವಿಶ್ವನಾಥ್, ಸಿಎಂ ಬಿ.ಎಸ್. ಯಡಿಯೂರಪ್ಪ, ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವತ್ತಿಗೂ ಯಡಿಯೂರಪ್ಪನವರ ಬಗ್ಗೆ ನನಗೆ ಕಳಕಳಿ ಇದೆ. ಅವರ ಬಗ್ಗೆ ನನಗೆ ಗೌರವ ಇತ್ತು. ಆದರೆ ಈಗ ಯಡಿಯೂರಪ್ಪ ನಾಲಿಗೆ ಕಳೆದುಕೊಂಡ ನಾಯಕ, ಮಾತು ತಪ್ಪಿದ ನಾಯಕ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಮಿತ್ ಶಾ ಭೇಟಿ ಮಾಡುತ್ತೇನೆ:
ಜನವರಿ 17ರಂದು ಅಮಿತ್ ಶಾ ಅವರ ಭೇಟಿಗೆ ಕಾಲಾವಕಾಶ ಕೇಳಿದ್ದೇನೆ. ಈ ವೇಳೆ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಅವರ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಅಧಿಕಾರ ವ್ಯಾಮೋಹ ಇರಬಾರದಾ?
ನನಗಿಂತ ಹಿರಿಯರಾದ ಯಡಿಯೂರಪ್ಪ ಅವರಿಗೆ ಅಧಿಕಾರದ ವ್ಯಾಮೋಹ ಇರಬೇಕಾದ್ರೆ, ನನಗೆ ಅಧಿಕಾರದ ವ್ಯಾಮೋಹ ಇದ್ದರೆ ತಪ್ಪೇನು ಎಂದು ಪ್ರಶ್ನಿಸಿದರು. ನಾನು ಪಕ್ಷಾಂತರಿ ಅಲ್ಲ. ನಾಯಕತ್ವದ ವಿರುದ್ಧ ಧ್ವನಿ ಎತ್ತಿ ಪಕ್ಷ ಬದಲಿಸಿದ್ದೇನೆ ಅಷ್ಟೇ ಎಂದು ಹೇಳಿದರು.
ನಾನು ಈ ಎಲ್ಲ ವಿಚಾರಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ಯೋಚನೆಯಲ್ಲಿದ್ದೇನೆ. ಬಾಂಬೆ-ಡೇಸ್ ಪುಸ್ತಕದಲ್ಲಿ ಸರ್ಕಾರ ರಚನೆಯ ಪ್ರಹಸನದ ಬಗ್ಗೆ ಬರೆಯುತ್ತಿದ್ದೇನೆ ಎಂದರು.
ನಾನು ಯಡಿಯೂರಪ್ಪ ನಾಯಕತ್ವದ ಬಗ್ಗೆ ಮಾತನಾಡುತ್ತಿಲ್ಲ. ಅವರ ನಡವಳಿಕೆ ಬಗ್ಗೆ ಪ್ರಶ್ನೆ ಎತ್ತಿದ್ದೇನೆ. ಯಾರು ಮಾತನಾಡುತ್ತಾರೆ ಅವರನ್ನು ವಿಲನ್ ಮಾಡುತ್ತಾರೆ ಎಂದು ಗುಡುಗಿದರು.
ಯೋಗೇಶ್ವರ್ ವಿರುದ್ಧ ಗರಂ!
ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಮಾಡಬಾರದಾ ಎಂದು ಸಿ.ಪಿ ಯೋಗೇಶ್ವರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 9,700 ವೈಯಕ್ತಿಕ ದೂರುಗಳಿವೆ, ಮೆಗಾ ಸಿಟಿ ಹಗರಣ ನಡೆದಿದೆ. ಜನರಿಂದ ಹಣ ಪಡೆದು ವಂಚಿಸಿದ್ದಾರೆ, ಅಂಥವರು ಮಂತ್ರಿಯಾದ್ರೆ ಹೇಗೆ ಎಂದು ಪ್ರಶ್ನಿಸಿದರು. ಹೈಕೋರ್ಟ್ನಲ್ಲಿ ತಡೆಯಾಜ್ಞೆ ತೆರವಾದ್ರೆ ಜೈಲಿಗೆ ಹೋಗುತ್ತಾರೆ. ಅಂಥವರನ್ನು ಮಂತ್ರಿ ಮಾಡಬೇಕಾ ಎಂದರು.