ಧಾರವಾಡ: ಹೆಣ್ಣು ಮಗು ಹುಟ್ಟಿತೆಂದು ಹೆತ್ತವರು ಕೈಬಿಟ್ಟು ಅಜ್ಜಿಯ ನೆರಳಿನಲ್ಲಿ ಬೆಳೆದ ಮಗು ಇದೀಗ ರಾಜ್ಯ ಮಟ್ಟದ ಸ್ಟ್ರೆಂಥ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿ ಕೀರ್ತಿ ತಂದಿದ್ದಾಳೆ.
ಸಾಧಿಕಾ ಅತ್ತಾರ ಜೆಎಸ್ಎಸ್ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿನಿ ಇದೀಗ ಮೊದಲ ಯತ್ನದಲ್ಲಿಯೇ ಸ್ಟ್ರೆಂಥ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಸಾಧಿಕಾ ತನ್ನ ಮಾವನ ಬಳಿಯೇ ತರಬೇತಿ ಪಡೆದು ಇಂತಹ ಸಾಧನೆ ಮಾಡಿದ್ದಾಳೆ.
ಅಕೆಯ ಅಜ್ಜ ರೆಹ್ಮಾನಸಾಬ ಕಳಸಾಪೂರ ದತ್ತು ಪಡೆದುಕೊಂಡು ಮನೆಗೆ ಕರೆತಂದು ಆರೈಕೆ ಮಾಡಿ ತಮ್ಮ ಮಕ್ಕಳೊಂದಿಗೆ ಆಕೆಯನ್ನೂ ಬೆಳೆಸಿದ್ದಾರೆ. ಬಾಲಕಿ ಸಾಧಿಕಾಗೆ ನಾಲ್ವರು ಮಾವಂದಿರಿದ್ದು, ಇಬ್ಬರು ಅತ್ತೆಯರು ಇಂದಿಗೂ ತಮ್ಮ ಸ್ವಂತ ಮಗಳಂತೆ ಆಕೆಯನ್ನು ಸಾಕಿ ಸಲಹುತ್ತಿದ್ದಾರೆ.
ಹುಟ್ಟಿದ 5-6 ತಿಂಗಳಲ್ಲಿ ತಂದೆ-ತಾಯಿ ಪ್ರೀತಿ ಕಳೆದುಕೊಂಡ ಸಾಧಿಕಾಗೆ ಅವರ ಮಾವ ಮಹ್ಮದ ಗೌಸ್ ಎಂಬುವವರೇ ತರಬೇತುದಾರರಾಗಿದ್ದಾರೆ. ಇಲ್ಲಿಯ ಸ್ಪಾರ್ಕ್ ವ್ಯಾಯಾಮ ಶಾಲೆಯಲ್ಲಿ ಪಳಗಿದ ಸಾಧಿಕಾ ಅಪ್ರತಿಮ ಸ್ಟ್ರೆಂಥ್ ಲಿಫ್ಟಿಂಗ್ ಮಾಡುತ್ತಾಳೆ. ಕಳೆದ ಕೆಲ ದಿನಗಳ ಹಿಂದೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಲ್ಲಿ ಕರ್ನಾಟಕ ರಾಜ್ಯ ಸ್ಟ್ರೆಂಥ್ ಲಿಫ್ಟಿಂಗ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಮೂರು ವಿಭಾಗದಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾಳೆ.
ಅಲ್ಲದೇ ಬರುವ ಮಾರ್ಚ್ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಮಿಂಚು ಹರಿಸುವ ವಿಶ್ವಾಸ ಹೊಂದಿದ್ದಾಳೆ.
ಓದಿ: ಹು-ಧಾ ಪಾಲಿಕೆ ವಾರ್ಡ್ ಮರು ವಿಂಗಡಣೆ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ