ಹುಬ್ಬಳ್ಳಿ: ಅವಳಿನಗರಕ್ಕೆ ಸುಮಾರು ವರ್ಷಗಳಿಂದ ನೀರು ಪೂರೈಸುತ್ತಿದ್ದ ಸರ್ಕಾರಿ ಸ್ವಾಮ್ಯದ ಜಲಮಂಡಳಿಯ ಸೇವೆ ಇನ್ನು ಮೂರ್ನಾಲ್ಕು ತಿಂಗಳಿಗೆ ಮಾತ್ರ ಸಿಗಲಿದೆ.
ಹೌದು, ಇಷ್ಟು ದಿನ ಸರ್ಕಾರಿ ಸ್ವಾಮ್ಯದಲ್ಲಿದ್ದ ಜಲಮಂಡಳಿಯು ಹುಬ್ಬಳ್ಳಿ-ಧಾರವಾಡಕ್ಕೆ ಪೂರೈಕೆಯಾಗುವ ನೀರು ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸಲಿದೆ. ಮುಂದಿನ 12 ವರ್ಷಗಳವರೆಗೆ ಅವಳಿ ನಗರಕ್ಕೆ ಖಾಸಗಿ ವಲಯದ ಎಲ್ ಆ್ಯಂಡ್ ಟಿ ಕಂಪನಿಯೇ ನೀರು ಪೂರೈಸಲಿದ್ದು, ನಿರ್ವಹಣೆಯನ್ನೂ ಇದೇ ಕಂಪನಿ ನಿರ್ವಹಿಸಲಿದೆ. ಇದರೊಂದಿಗೆ 2021ರ ಹೊಸ ವರ್ಷದಿಂದ ನೀರು ವಹಿವಾಟಿನಲ್ಲಿ ಖಾಸಗಿ ಕಂಪನಿ ದರ್ಬಾರ್ ಆರಂಭವಾಗಲಿದೆ.
ಕಳೆದ ಜುಲೈ ತಿಂಗಳಿನಲ್ಲಿಯೇ ನೀರು ಪೂರೈಕೆ ಮತ್ತು ನಿರಂತರ ನೀರು ಯೋಜನೆ ಗುತ್ತಿಗೆ ಪಡೆದುಕೊಂಡಿರುವ ಕಂಪನಿ ಜತೆಗೆ ಜಲಮಂಡಳಿಯು ಹಸ್ತಾಂತರ ಪ್ರಕ್ರಿಯೆ ಅವಧಿಯಲ್ಲಿ (ಟ್ರಾನ್ಸಮಿಷನ್ ಪಿರಿಯಡ್) ಕೆಲಸ ಮಾಡುತ್ತಿದೆ. ವ್ಯಾಪಕವಾಗಿ ಹರಡಿರುವ ನೀರಿನ ಜಾಲ ಮತ್ತು ಪೂರೈಕೆ ವ್ಯವಸ್ಥೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ. ನೀರು ಪೂರೈಕೆ ಮತ್ತು ನಿರಂತರ ನೀರು ಯೋಜನೆ ಜಾರಿಯಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (ಕೆಯುಡಿಐಎಫ್ ಸಿ)ಯು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು, ಜಲಮಂಡಳಿಯಿಂದ ಎಲ್ಲಾ ದಾಖಲೆ ಮತ್ತು ಹಸ್ತಾಂತರ ಪ್ರಕ್ರಿಯೆಗಳನ್ನು ನೋಡಿಕೊಳ್ಳಲಾಗುತ್ತದೆ.
24*7 ನೀರಿನ ಯೋಜನೆಗೆ 763 ಕೋಟಿ...
ಅವಳಿ ನಗರದಲ್ಲಿನ ಸದ್ಯದ 67 ವಾರ್ಡ್ಗಳಿಗೆ ನಿರಂತರ ನೀರು ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ 26 ವಾರ್ಡ್ಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 41 ವಾರ್ಡ್ಗಳಲ್ಲಿ 24*7 ನೀರು ಯೋಜನೆಯನ್ನು ಎಲ್ ಆಂಡ್ ಟಿ ಕಂಪನಿ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಇದಕ್ಕಾಗಿ ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಾಜ್ಯ ಸರ್ಕಾರ 763 ಕೋಟಿ ರೂ. ವಿನಿಯೋಗಿಸಲಿದೆ. 2025ಕ್ಕೆ ಪೂರ್ಣ ಅವಳಿ ನಗರದಾದ್ಯಂತ ನಿರಂತರ ನೀರು ಯೋಜನೆಯನ್ನು 2025ಕ್ಕೆ ಪೂರ್ಣಗೊಳಿಸಲು ಸರ್ಕಾರ ತಾಕೀತು ಮಾಡಿದೆ.
2032ರವರೆಗೆ ನೀರು ಪೂರೈಕೆ ವ್ಯವಸ್ಥೆ ನಿರ್ವಹಣೆ ಹೊಣೆ ಹೊರಲಿರುವ ಖಾಸಗಿ ಕಂಪನಿಗೆ 400 ಕೋಟಿ ರೂ.ಗಳನ್ನು ಬಳಕೆದಾರರ ಶುಲ್ಕ (ಯುಸರ್ ಜಾರ್ಜ್) ಎಂದು ವರ್ಗಾಯಿಸಲಾಗುತ್ತದೆ.
ಪ್ರಸ್ತುತ 2.50 ಲಕ್ಷಕ್ಕೂ ಹೆಚ್ಚು ನೀರಿನ ಸಂಪರ್ಕಗಳಿದ್ದು, ಪ್ರತೀ ತಿಂಗಳು ಸರಾಸರಿ ಹುಬ್ಬಳ್ಳಿ ವಿಭಾಗದಲ್ಲಿ 2.30 ಕೋಟಿ ಹಾಗೂ ಧಾರವಾಡದಲ್ಲಿ 1.20 ಕೋಟಿ ರೂ.ಗಳಷ್ಟು ಬಿಲ್ ಸಂಗ್ರಹವಾಗುತ್ತಿದೆ. ಈ ಬಳಕೆದಾರರ ಶುಲ್ಕವನ್ನು ನಿರ್ವಹಣೆಗೆ ಎಂದು ಮಹಾನಗರ ಪಾಲಿಕೆಯು ಕಂಪನಿಗೆ ನೀಡಲಿದೆ. ಈ ಮೂಲಕ ಅವಳಿ ನಗರದಲ್ಲಿ ನೀರು ಪೂರೈಕೆಯಲ್ಲಿ ಪಾರದರ್ಶಕತೆ ಪಡೆಯುವ ವಿಶ್ವಾಸವನ್ನು ಮಹಾನಗರ ಪಾಲಿಕೆ ಹೊಂದಿದೆ ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್ ಎಂ.ಕೆ.ಮನಗೊಂಡ ತಿಳಿಸಿದ್ದಾರೆ.