ಹುಬ್ಬಳ್ಳಿ:ಲಾಕ್ಡೌನ್ ಎಫೆಕ್ಟ್ ನಿಂದ ಬಿಕೋ ಎನ್ನುತ್ತಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಇದೀಗ ಮತ್ತೆ ಹೊಸ ರಂಗು ಪಡೆದುಕೊಳ್ಳುತ್ತಿದೆ. ಪುನಃ ವಿಮಾನ ಹಾರಾಟ ಪ್ರಾರಂಭಗೊಂಡ ಪರಿಣಾಮ ಹುಬ್ಬಳ್ಳಿಯಲ್ಲಿ ವಿಮಾನ ಪ್ರಯಾಣ ಸಹಜ ಸ್ಥಿತಿಯತ್ತ ಮರಳಿದೆ.
ಕೊರೊನಾ ವೈರಸ್ ಭೀತಿ ಹಿನ್ನೆಲೆ ಲಾಕ್ಡೌನ್ ಘೋಷಣೆಯಾದಾಗ ಬಂದ್ ಆಗಿದ್ದ ವಿಮಾನ ಪ್ರಯಾಣ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮೆ.25 ರಿಂದ ಪ್ರಾರಂಭವಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಇಂಡಿಗೋ ಮತ್ತು ಸ್ಟಾರ್ ಏರ್ ವಿಮಾನ ಪ್ರಯಾಣ ಪ್ರಾರಂಭಗೊಂಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮತ್ತೆ ವಿಮಾನಯಾನ ಮೊದಲಿನ ಸ್ಥಿತಿಗೆ ಮರಳಿದೆ.
ಆಗಸ್ಟ್ ಕೊನೆ ವಾರದಲ್ಲಿ ಏಳು ಹಾಗೂ ನಂತರದ ದಿನಗಳಲ್ಲಿ ಹತ್ತರಿಂದ ಹನ್ನೆರಡು ವಿಮಾನಗಳು ಕಾರ್ಯಾರಂಭ ಮಾಡಿದ್ದವು. ಪ್ರಯಾಣಿಕರಿಗಾಗಿ ಮುಂಜಾಗ್ರತಾ ಕ್ರಮವಾಗಿ ಸೋಶಿಯಲ್ ಡಿಸ್ಟೆನ್ಸ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್ನಿಂದಲೇ ವಿಮಾನ ಪ್ರಯಾಣಕ್ಕೆ ಜನ್ರು ಮೊರೆ ಹೋಗಿದ್ದು, 2,355 ಜನರು ವಿಮಾನದಲ್ಲಿ ಪ್ರಯಾಣಿಸಿದ್ರು. ವಿಮಾನ ಪ್ರಯಾಣ ಆರೋಗ್ಯಕರ ಹಾಗೂ ಆರಾಮದಾಯಕ ಎಂಬ ಭಾವನೆ ಜನರಲ್ಲಿ ವ್ಯಕ್ತವಾದ ಬೆನ್ನಲ್ಲೇ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣ ಚೇತರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಜನರು ಹೆಚ್ಚಿನ ವಿಮಾನ ಸೇವೆ ಪಡೆಯಲಿದ್ದಾರೆ ಎಂಬ ವಿಶ್ವಾಸವನ್ನು ವಿಮಾನಯಾನ ಅಧಿಕಾರಿಗಳು ಹೊಂದಿದ್ದಾರೆ.
ಲಾಕ್ಡೌನ್ ಪೂರ್ವದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಫೆಬ್ರವರಿ ತಿಂಗಳಲ್ಲಿ 673 ವಿಮಾನಗಳು ಪ್ರಯಾಣಿಸಿದ್ದು, 40870 ಪ್ರಯಾಣಿಕರು ಪ್ರಯಾಣಿಸಿದ್ದರು. ಅಲ್ಲದೇ ಮಾರ್ಚ್ ತಿಂಗಳಿನಲ್ಲಿ 501 ವಿಮಾನ ಸಂಚರಿಸಿ 23,979 ಪ್ರಯಾಣಿಕರು ಸಂಚರಿಸಿದ್ದರು. ಆದರೆ ಲಾಕ್ಡೌನ್ ಘೋಷಣೆಯಿಂದ ಏಪ್ರಿಲ್ ತಿಂಗಳಿನಲ್ಲಿ ಜೀರೊ ಪ್ರಮಾಣಕ್ಕೆ ಇಳಿದಿತ್ತು. ಅಲ್ಲದೇ ಮೇ ತಿಂಗಳಲ್ಲಿ 04 ವಿಮಾನ ಸಂಚಾರ ನಡೆಸಿ 67 ಪ್ರಯಾಣಿಕರು ಸಂಚಾರ ಮಾಡಿದ್ದರು. ಜೂನ್ ತಿಂಗಳಲ್ಲಿ14 ವಿಮಾನ ಸಂಚಾರ ನಡೆಸಿ ಕೇವಲ 62 ಜನ ಪ್ರಯಾಣಿಸಿದ್ದರು. ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಚೇತರಿಕೆ ಕಂಡಿದ್ದು, ಜುಲೈನಲ್ಲಿ 40 ವಿಮಾನ ಸಂಚರಿಸಿ 930 ಜನ ಪ್ರಯಾಣಿಸಿದ್ದಾರೆ.