ಧಾರವಾಡ: ಈ ವರ್ಷ ಸುರಿದ ಭೀಕರ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಹಳ್ಳಗಳೆಲ್ಲಾ ತುಂಬಿ ಜಮೀನು, ಬೆಳೆಗಳು ಹಾಗೂ ರಸ್ತೆಗಳೆಲ್ಲಾ ಹಾನಿಯಾಗಿದ್ದು, ಈ ಹಾನಿಯ ಬಗ್ಗೆ ಆದಷ್ಟು ಬೇಗ ಸಮೀಕ್ಷೆ ಮಾಡಿ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಯಾದವಾಡ, ಲಕಮಾಪೂರ, ಪುಡಕಲಕಟ್ಟಿ ಗ್ರಾಮದ ರೈತರು ಧಿಕ್ಕಾರ ಕೂಗುವುದರ ಮೂಲಕ ಅಸಮಾಧಾನ ಹೊರಹಾಕಿದರು. ತಾಲೂಕಿನ ಗ್ರಾಮಗಳಲ್ಲಿ ಅತಿಯಾದ ಮಳೆಯಿಂದಾಗಿ ಪ್ರವಾಹ ಉಂಟಾಗಿ ಹಳ್ಳದ ಎರಡು ಬದಿಯ ಜಮೀನುಗಳು ಅತಿಯಾಗಿ ಹಾನಿಯಾಗಿ, ಜಮೀನಿನಲ್ಲಿ ಬೆಳೆದಿರುವ ಎಲ್ಲಾ ಬೆಳೆಗಳು ಸಂಪೂರ್ಣವಾಗಿ ಹಾಳಾಗಿವೆ. ಮಳೆಯಿಂದಾಗಿ ಜಮೀನುಗಳಲ್ಲಿ ಕಲ್ಲು, ಮರಳು, ಕಂದಕಗಳು ನಿರ್ಮಾಣವಾಗಿ ಜಲಾವೃತವಾಗಿದ್ದು, ಇಷ್ಟು ದಿನ ಕಳೆದರೂ ಇದುವರೆಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಯಾವುದೇ ಸಮೀಕ್ಷೆ, ಸ್ಥಳ ಪರಿಶೀಲನೆ ಹಾಗೂ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ಕೂಡಲೇ ಗ್ರಾಮದ ಜಮೀನುಗಳ ಸಮೀಕ್ಷೆ ನಡೆಸಿ, ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.