ಹುಬ್ಬಳ್ಳಿ: ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟ ಪ್ರಕರಣದಿಂದ ಜನರಲ್ಲಿದ್ದ ಆತಂಕ ಕಡಿಮೆಯಾಗಿದೆ. ಕಳೆದ ಐದು ದಿನಗಳಿಂದ ಬಯಲು ಪ್ರದೇಶದಲ್ಲಿ ಹೂತಿಟ್ಟಿದ್ದ ಸ್ಫೋಟಕಗಳನ್ನು ಬೆಂಗಳೂರಿನಿಂದ ಬಂದ ಸ್ಫೋಟಕ ವಸ್ತುಗಳ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿನ ಸುರಕ್ಷಿತ ಸ್ಥಳದಲ್ಲಿ ಶನಿವಾರ ಸಂಜೆ ನಿಷ್ಕ್ರಿಯಗೊಳಿಸಿದ್ದಾರೆ.
ರೈಲ್ವೆ ನಿಲ್ದಾಣದಿಂದ ವಿಶೇಷ ವಾಹನದ ಮೂಲಕ ಸಿಎಆರ್ ಮೈದಾನಕ್ಕೆ ಸ್ಫೋಟಕ ವಸ್ತುಗಳನ್ನು ಸಾಗಿಸಲಾಗಿತ್ತು. ಎಂಟು ಚಿಕ್ಕ ಬಾಕ್ಸ್‌ಗಳಲ್ಲಿದ್ದ ಒಣಗಿದ ಲಿಂಬೆ ಹಣ್ಣಿನಾಕಾರದ ಹದಿನೈದು ಸ್ಫೋಟಕಗಳನ್ನು ಅಗತ್ಯ ಕ್ರಮಗಳನ್ನು ಕೈಗೊಂಡು, ನಿಯಮಾನುಸಾರ ಒಂದೊಂದಾಗಿ ನಿಷ್ಕ್ರಿಯಗೊಳಿಸಲಾಗಿದೆ.
ಸ್ಫೋಟದ ತೀವ್ರತೆ ಕಂಡು ಹಿಡಿಯಲು, ಸಂಜೆ ಸ್ಫೋಟಕ ವಸ್ತುಗಳನ್ನು ಸ್ಫೋಟಗೊಳಿಸಿದರು. ನಿನ್ನೆ ಸಂಜೆ ಐದು ಗಂಟೆಗೆ ಆರಂಭವಾದ ಸ್ಫೋಟಕ ನಿಷ್ಕ್ರಿಯ ಕಾರ್ಯ ರಾತ್ರಿ 8 ಗಂಟೆವರೆಗೂ ನಡೆದಿದೆ. ಮೈದಾನದ ಪ್ರವೇಶ ದ್ವಾರದ ಬಳಿ ಬಿಗಿ ಭದ್ರತೆ ಜತೆಗೆ ಆರು ಮಂದಿ ತಜ್ಞರ ತಂಡ ಸ್ಫೋಟಕ ನಿಷ್ಕ್ರಿಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು.
ಈಗಾಗಲೇ ಆರ್‌ಪಿಎಫ್ ಸಿಬ್ಬಂದಿ ಹಾಗೂ ಸ್ಟೇಷನ್ ವ್ಯವಸ್ಥಾಪಕರನ್ನು ಕರ್ತವ್ಯ ಲೋಪದ ಮೇರೆಗೆ ಅಮಾನತು ಮಾಡಿದ್ದು, ಅದೇ ರೀತಿ, ಇನ್ನಷ್ಟು ಭದ್ರತಾ ಸಿಬ್ಬಂದಿಯನ್ನು ತನಿಖಾ ವರದಿ ಬಂದ ನಂತರ ಅಮಾನತು ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ವಿಜಯವಾಡದಿಂದ ಹುಬ್ಬಳ್ಳಿವರೆಗಿನ 25 ರೈಲ್ವೆ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್‌ಪಿಎಫ್ ಸಿಬ್ಬಂದಿಯ ಕರ್ತವ್ಯ ಲೋಪವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದ್ದು, ಬಳ್ಳಾರಿಯಿಂದ ಹುಬ್ಬಳ್ಳಿಗೆ ತಲುಪುವ ಏಳು ನಿಲ್ದಾಣಗಳಲ್ಲಿ ಒಂದು ನಿಲ್ದಾಣದಿಂದ ಸ್ಫೋಟಕ ತುಂಬಿದ ಬಕೆಟ್ ನ ರೈಲಿನಲ್ಲಿ ಇಟ್ಟಿರುವ ಶಂಕೆ ವ್ಯಕ್ತವಾಗಿದೆ. ಭದ್ರತಾ ಸಿಬ್ಬಂದಿಯ ಲೋಪದಿಂದ ಸ್ಫೋಟಕ ವಸ್ತು ನಿಲ್ದಾಣ ಪ್ರವೇಶಿಸಿರುವುದರಿಂದ, ತನಿಖಾ ವರದಿ ಬಂದ ನಂತರ ಮತ್ತಷ್ಟು ಸಿಬ್ಬಂದಿ ಅಮಾನತಾಗುವ ಸಾಧ್ಯತೆಯಿದೆ.