ಹುಬ್ಬಳ್ಳಿ: ಸಂವಿಧಾನ ದಿನ ಆಚರಿಸಲು ಹೊರಡಿಸಿದ್ದ ಸುತ್ತೋಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗಿದ್ದು, ಈ ರೀತಿ ಅವಹೇಳನ ಮಾಡಿದವರ ವಿರುದ್ಧ ದೇಶದ್ರೋಹ, ಕೋಮು ಸೌಹಾರ್ಧತೆಗೆ ದಕ್ಕೆ ತಂದ ಪ್ರಕರಣ ದಾಖಲಿಸಬೇಕೆಂದು ದಲಿತ ಸಂಘಟನೆ ಮುಖಂಡ ಗುರುನಾಥ ಉಳ್ಳಿಕಾಶಿ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಅಕ್ಟೋಬರ್ 28 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಅದರಲ್ಲಿ ಅಂಬೇಡ್ಕರ್ ಅವರನ್ನು ಅಪಮಾನಿಸುವ ಬರಹಗಳು ಇದ್ದವು. ಇದನ್ನು ಸಮತಾ ಸೇನಾ ಸೇರಿದಂತೆ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ತೀವ್ರವಾಗಿ ಖಂಡಿಸಿದೆ ಎಂದರು.
ಅಂಬೇಡ್ಕರ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ಇಲಾಖೆಯ ನಿರ್ದೇಶಕರು, ಎಫ್ಡಿಸಿ ಸೇರಿದಂತೆ ನಾಲ್ಕು ಅಧಿಕಾರಿಗಳನ್ನು ಈಗಾಗಲೇ ಇಲಾಖೆ ಅಮಾನತು ಮಾಡಿದ್ದು, ಇವರಷ್ಟೇ ಈ ಕೃತ್ಯ ಮಾಡಿಲ್ಲ. ಇವರನ್ನು ಬಿಟ್ಟು ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಸೇರಿದಂತೆ ಮುಂತಾದವರು ಭಾಗಿಯಾಗಿದ್ದಾರೆ. ಇವರನ್ನು ಸಹ ಶಿಕ್ಷಣ ಸಚಿವರು ಮುಂದಿನ ಏಳು ದಿನಗಳ ಒಳಗಾಗಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಉಮಾಶಂಕರ್ರನ್ನು ಅಮಾನತು ಮಾಡಲು ಆಗದಿದ್ದರೆ ಈ ಕೃತ್ಯದಲ್ಲಿ ಸರ್ಕಾರವೇ ಭಾಗಿಯಾಗಿದೆ ಎಂದು ಪರಿಗಣಿಸಿ ನ. 26 ರಿಂದ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಉಗ್ರ ಹೋರಾಟ ಮಾಡಲಾಗುವುದು. ಅಲ್ಲದೇ ಹು-ಧಾರವಾಡದಲ್ಲಿನ ಎಲ್ಲಾ ಪೊಲೀಸ್ ಇಲಾಖೆಗಳಲ್ಲಿ ಪ್ರತ್ಯೇಕ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.