ಹುಬ್ಬಳ್ಳಿ: ಗಂಡು ಮೆಟ್ಟಿದ ನಾಡಿನ ಪ್ರಸಿದ್ಧ ವೃತ್ತವೇ ಚೆನ್ನಮ್ಮ ಸರ್ಕಲ್. ಹುಬ್ಬಳ್ಳಿಗೆ ಮುಕುಟದಂತಿರುವ ಕೇಂದ್ರ ಸ್ಥಳದಲ್ಲಿರುವ ರಾಣಿ ಚೆನ್ನಮ್ಮನ ಪುತ್ಥಳಿ ಶಿಥಿಲಗೊಂಡಿದೆ. ಪುತ್ಥಳಿಯ ಸುತ್ತಮುತ್ತ ಬಿರುಕುಗಳು ಕಾಣಿಸಿಕೊಂಡಿವೆ.
ಸುಮಾರು 40 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ಪುತ್ಥಳಿಗೆ ಈಗ ಕಂಟಕ ಎದುರಾಗಿದೆ. ಚೆನ್ನಮ್ಮ ಪುತ್ಥಳಿಯ ತಳಭಾಗದ ಬೆಸ್ಮೆಂಟ್ಗೆ ಹೊಂದಿಸಿದ ಕಲ್ಲುಗಳು ಹೊರಬಂದಿವೆ. ಹೀಗಾಗಿ ಚೆನ್ನಮ್ಮ ಮೂರ್ತಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರದ 8 ಪ್ರಮುಖ ರಸ್ತೆಗಳು ಒಂದೆಡೆ ಸೇರುವ ಈ ವೃತ್ತದಲ್ಲಿ ವಾಹನಗಳ ಓಡಾಟಕ್ಕೆ ವ್ಯವಸ್ಥಿತ ಸಂಚಾರ ಮಾರ್ಗ ಮಾಡಲಾಗಿದೆ.
ವೃತ್ತಕ್ಕೆ ಹೊಂದಿಕೊಂಡ ಒಂದೊಂದು ರಸ್ತೆಯಲ್ಲಿಯೂ ಏಕಕಾಲಕ್ಕೆ ನೂರಾರು ವಾಹನಗಳ ಓಡಾಡುತ್ತವೆ. ಈಗ ಬದಲಾದ ಮಾರ್ಗ ವ್ಯವಸ್ಥೆಯಲ್ಲಿ ನಿಲಿಜಿನ್ ರಸ್ತೆ ಮಾರ್ಗವಾಗಿ ಸಂಚರಿಸುವ ಬಸ್‌ಗಳಲ್ಲಿ ಬರುವ ಪ್ರಯಾಣಿಕರು ಚೆನ್ನಮ್ಮ ವೃತ್ತದಲ್ಲಿ ಇಳಿದುಕೊಳ್ಳುತ್ತಾರೆ. ಹೀಗಾಗಿ ಪುತ್ಥಳಿಯ ಅಡಿಪಾಯ ಕುಸಿದುಬಿದ್ದರೆ ದೊಡ್ಡ ಅಪಾಯ ಸಂಭವಿಸುವುದು ಗ್ಯಾರಂಟಿ. ಹೀಗಾಗಿ ಕೂಡಲೇ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ದುರಸ್ತಿ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಮನವಿಗೆ ಡೋಂಟ್ ಕೇರ್:
ಈಹಿಂದೆ ಮಹಾನಗರ ಪಾಲಿಕೆಗೆ ಪುತ್ಥಳಿಯ ಬಿರುಕಿನ ಕುರಿತು ಮನವಿ ಮಾಡಲಾಗಿದೆ. ಆದರೂ ಹು-ಧಾ ಮಹಾನಗರ ಪಾಲಿಕೆ ಮಾತ್ರ ಈ ಬಗ್ಗೆ ಗಮನ ಹರಿಸಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ.