ಧಾರವಾಡ: ಎಲ್ಲೆಡೆ ಇದೀಗ ಕೊರೊನಾ ವೈರಸ್ ಮಹಾಮಾರಿಯದ್ದೇ ಸದ್ದು. ವೈರಸ್ ಆಕಾರ ನೋಡಿದ್ರೆ ಜನರು ಆತಂಕಗೊಳ್ಳುತ್ತಾರೆ. ಆದ್ರೆ ಧಾರವಾಡದಲ್ಲಿ ವೈರಸ್ ರೀತಿಯಲ್ಲಿ ಅರಳಿದ ಹೂವೊಂದು ಜನರಿಗೆ ಖುಷಿ ಹಂಚುತ್ತಿದೆ.
ವಿಚಿತ್ರ ಅಂದರೆ ಹೂವು ಕೊರೊನಾ ವೈರಸ್ ಆಕಾರದಲ್ಲಿದೆ. ಬಣ್ಣ ಮಾತ್ರ ಕೆಂಪು. ಧಾರವಾಡದ ಮಾಳಮಡ್ಡಿ ಏರಿಯಾದಲ್ಲಿರುವ ಕುಲಕರ್ಣಿ ಕಾಂಪೌಂಡ್ವೊಂದರಲ್ಲಿ ಬೆಳೆದ ಬಗೆ ಬಗೆಯ ಸಸ್ಯಗಳು ಪ್ರಕೃತಿಯ ಅಂದ ಹೆಚ್ಚಿಸಿವೆ.
ಈ ಹೂವಿಗೆ ಥಂಡರ್ ಲಿಲ್ಲಿ ಎನ್ನಲಾಗುತ್ತದೆ. ಈ ಹೂವಿಗೆ ಕನ್ನಡದಲ್ಲಿ ಯಾವುದೇ ಹೆಸರಿಲ್ಲದಿದ್ರೂ ಇದರ ಆಕಾರ ನೋಡಿ ಬೆಂಕಿಯ ಹೂವು, ಬೆಂಕಿ ಚೆಂಡು ಎನ್ನಲಾಗುತ್ತದೆಯಂತೆ. ಈ ಹೂವು ಧಾರವಾಡದ ಗಲ್ಲಿಗಲ್ಲಿಗಳಲ್ಲೂ ಇದೀಗ ಕಂಡು ಬರುತ್ತಿದೆ. ಆದ್ರೆ ಕೊರೊನಾ ವೈರಸ್ ಹೆಚ್ಚಳವಾಗಿರುವ ಹೊತ್ತಲ್ಲಿ ಹೀಗೆ ಸಾಲು ಸಾಲು ಹೂವುಗಳು ಅರಳಿದ್ದು, ನೋಡಿ ಜನ ಇದ್ದನ್ನು ಕೊರೊನಾ ವೈರಸ್ ಹೂವೇ ಎನ್ನುತ್ತಿದ್ದಾರೆ.
ಭೂಮಿಯ ಒಳಭಾಗದಲ್ಲಿ ಬಚ್ಚಿಟ್ಟುಕೊಂಡಂತೆ ಇರುವ ಗಡ್ಡೆಗಳು ಮೊದಲ ಮಳೆಯ ಬಳಿಕ ಒಂದೊಂದಾಗಿ ಹೊರಗೆ ಬರುತ್ತವೆ. ಇಲ್ಲಿರೋದು 30-40 ವರ್ಷಗಳಷ್ಟು ಹಳೆಯ ಗಡ್ಡೆಗಳಂತೆ. ಇನ್ನೊಂದು ವಿಚಿತ್ರ ಅಂದ್ರೆ, ಈ ಹೂವಿನ ಗಡ್ಡೆ ಮೇಲಕ್ಕೆ ಬಂದ ತಕ್ಷಣವೇ ಮೊದಲು ಹೂವು ಬಿಡುತ್ತದೆ. ಈ ಹೂವು ದೊಡ್ಡದಾದ ಬಳಿಕ ಎಲೆಗಳು ಬರುತ್ತವೆ. ಮೂಲತಃ ದಕ್ಷಿಣ ಆಫ್ರಿಕಾದ ಈ ಸಸ್ಯ ಭಾರತಕ್ಕೆ ಬಂದಿದ್ದೇ ಬಲು ಅಚ್ಚರಿಯ ಸಂಗತಿ.
ಸುಮಾರು ಒಂದು ವಾರದವರೆಗೆ ಇರುವ ಹೂವು ಬಳಿಕ ಒಣಗಿ ಹೋಗುತ್ತೆ. ಆದರೆ ವನದ ತುಂಬೆಲ್ಲಾ ಹಸಿರೆಲೆಯನ್ನು ಉಳಿಸಿಕೊಂಡ ಗಡ್ಡೆ ಮಾತ್ರ ನೆಲದೊಳಗೆ ಹಾಗೆಯೇ ವರ್ಷಾನುಗಟ್ಟಲೆ ಭೂಗತವಾಗಿ ಬದುಕುಳಿಯುತ್ತೆ. ಹೊರಗಡೆ ಮಾತ್ರ ಸಸ್ಯ ಮೇಲ್ನೋಟಕ್ಕೆ ಒಣಗಿ ಹೋದಂತೆ ಕಂಡರೂ ಭೂಮಿಯ ಒಳಗಡೆ ಗಡ್ಡೆಯ ರೂಪದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ.