ಹುಬ್ಬಳ್ಳಿ: ರಾಖಿ ಹಬ್ಬ ಇನ್ನೇನು ಸನಿಹವಿದೆ. ಆದರೆ, ಈ ಬಾರಿ ಹಬ್ಬಕ್ಕೆ ಕೊರೊನಾ ಅಡ್ಡಿಯಾಗಿದ್ದು, ಮಾರುಕಟ್ಟೆಯಲ್ಲಿ ರಾಖಿ ಖರೀದಿ ಮಾಡಲು ಗ್ರಾಹಕರು ಬರುತ್ತಿಲ್ಲ.
ರಾಖಿ ಹಬ್ಬ ಬಂದರೆ ಸಾಕು ಅಣ್ಣ ತಂಗಿಯರಿಗೆ ಇನ್ನಿಲ್ಲದ ಸಡಗರ. ತಂಗಿ ಅಣ್ಣನಿಗೆ ಈ ವರ್ಷ ಹೊಸ ರಾಕಿ ಕಟ್ಟಬೇಕು. ಅವನಿಗೆ ಹರಸಬೇಕೆಂದು ಆಸೆ ಇರುವುದು ಸಹಜ. ಅದರಂತೆ ಅಣ್ಣ ಕೂಡಾ ತಂಗಿಗೆ ಏನಾದರೂ ವಿಶೇಷ ಕೊಡುಗೆ ಕೊಡಬೇಕೆಂದು ಅಂದುಕೊಳ್ಳುವುದು ಸರ್ವೇ ಸಾಮಾನ್ಯ. ಆದರೆ ಇವೆಲ್ಲದಕ್ಕೂ ಕೊರೊನಾ ಬ್ರೇಕ್ ಹಾಕಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅಂಗಡಿ ಮಾಲೀಕರು, ಜನರು ಮನೆಯಿಂದ ಹೊರಬರಲು ಭಯ ಭೀತರಾಗಿದ್ದಾರೆ. ಇದೀಗ ಜಿಲ್ಲೆಯಲ್ಲಿ ಲಾಕ್ಡೌನ್ ತೆರವುಗೊಳಿಸಲಾಗಿದ್ದು, ಎಲ್ಲ ಮಾರುಕಟ್ಟೆಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಅದರಂತೆ ಅಂಗಡಿಗಳಲ್ಲಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವುದು ಕಡ್ಡಾಯವಾಗಿದೆ. ಸೀಸನ್ಗೆ ತಕ್ಕಂತೆ ನಮ್ಮ ವ್ಯಾಪಾರಿಗಳು ನಡೆಯುತ್ತವೆ. ಹೀಗಾಗಿ ಯಾವುದೇ ಭಯವಿಲ್ಲದೇ ಜನರು ರಾಖಿ ಖರೀದಿ ಮಾಡಿ ಹಬ್ಬವನ್ನು ಆಚರಿಸಬಹುದು ಎನ್ನುತ್ತಾರೆ.
ಆದರೆ, ಗ್ರಾಹಕರು ಮಾತ್ರ ಅಂಗಡಿಯತ್ತ ಸುಳಿಯದೇ ಇರುವುದು ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ. ಇನ್ನು ಅಣ್ಣ ತಂಗಿಯರ ಹಬ್ಬವಾದ ರಾಖಿ ಹಬ್ಬಕ್ಕೆ ಕೊರೊನಾ ಈ ಬಾರಿ ಅಡ್ಡಿ ಮಾಡಿದ್ದು, ಜನರು ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಸಂಪ್ರದಾಯದಂತೆ ಹಬ್ಬ ಆಚರಣೆ ಮಾಡುವುದು ಸೂಕ್ತವಾಗಿದೆ.