ಹುಬ್ಬಳ್ಳಿ: ಕೊರೊನಾ ಹಾವಳಿಯಿಂದ ಎಲ್ಲಾ ಕ್ಷೇತ್ರಗಳು ನಲುಗಿ ಹೋಗಿದ್ದು, ಇದಕ್ಕೆ ಜವಳಿ ವ್ಯಾಪಾರ ಕೂಡ ಹೊರತಾಗಿಲ್ಲ. ಈ ನಡುವೆ ನಗರದ ಜವಳಿ ವ್ಯಾಪಾರಿಯೊಬ್ಬರು ವ್ಯಾಪಾರದ ಜೊತೆಗೆ ಮಾಸ್ಕ್ ವಿತರಿಸಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ.
ನಗರದ ಕಾಳಮ್ಮನ ಅಗಸಿಯಲ್ಲಿರುವ ಜೈನಮ್ ಸಿಂಡಿಕೇಟ್ ಮಳಿಗೆಯ ಮಾಲೀಕ ಈ ರೀತಿಯ ಸ್ತುತ್ಯರ್ಹ ಕಾರ್ಯ ಮಾಡುತ್ತಿದ್ದಾರೆ. ಮಳಿಗೆಗೆ ಸೂರತ್, ಇಂದೋರ್ ಸೇರಿದಂತೆ ವಿವಿಧೆಡೆಯಿಂದ ಸೀರೆಗಳನ್ನು ತರಿಸಿಕೊಳ್ಳುತ್ತಾರೆ. ಸೀರೆ ಕೊಳ್ಳಲು ಬರುವ ಗ್ರಾಹಕರಿಗೆ ಸೀರೆ ಜೊತೆಗೆ ಮಾಸ್ಕ್ ಉಚಿತವಾಗಿ ನೀಡುತ್ತಾರೆ. ಎಮ್.ಬಿ. ಡಿಸೈನರ್ ಕಂಪನಿ ತನ್ನ ಪ್ರತಿ ಸೀರೆ ಬಾಕ್ಸ್ನಲ್ಲಿ ಒಂದು ಮಾಸ್ಕ್ ನೀಡುತ್ತಿದೆ. ಅಷ್ಟೇ ಅಲ್ಲದೇ ಪ್ರತಿಯೊಂದು ಡ್ರೆಸ್ ಜೊತೆ ಹಾಗೂ ಮಾಸ್ಕ್ ಇಲ್ಲದೇ ಬರುವವರಿಗೆ ಮಾಸ್ಕ್ ನೀಡುತ್ತಾ ಈ ಮಳಿಗೆಯ ಮಾಲೀಕರು ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ .
ಇದಲ್ಲದೇ ಬರುವ ಗ್ರಾಹಕರ ಸುರಕ್ಷತೆಗಾಗಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಮಾಡುವುದರ ಜೊತೆಗೆ ಗ್ರಾಹಕರ ಆರೋಗ್ಯ ವಿಚಾರಿಸುತ್ತಿದ್ದಾರೆ. ಇಲ್ಲಿ ಬರುವ ಗ್ರಾಹಕರು ಸಹ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ರೀತಿ ನಗರದಲ್ಲಿರುವ ಬಹುತೇಕ ಜವಳಿ ಮಳಿಗೆ ಮಾಲೀಕರು ಬೇಡಿಕೆ ಸಲ್ಲಿಸಿದ್ದು ಮುಂದಿನ ದಿನಗಳಲ್ಲಿ ಮಳಿಗೆಗೆ ಕಳುಹಿಸುವ ಬಟ್ಟೆ ಬಾಕ್ಸ್ಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಹೊಡೆತಕ್ಕೆ ನೆಲಕಚ್ಚಿದ ಬಟ್ಟೆ ವ್ಯಾಪಾರವು ಈಗ ಸುಧಾರಿಸುತ್ತಿದೆ. ಜೊತೆಗೆ ಕೊರೊನಾ ಜಾಗೃತಿ ಮೂಡಿಸಿ ಬಟ್ಟೆ ಖರೀದಿ ಮಾಡಿದ ಗ್ರಾಹಕರಿಗೆ ಉಚಿತವಾಗಿ ಮಾಸ್ಕ್ ನೀಡುತ್ತಿರುವುದರಿಂದ ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.