ಧಾರವಾಡ : ಕೊರೊನಾ ಸೋಂಕು ಹೆಚ್ಚು ಹರಡುತ್ತಿದೆ. ಹಾಗಾಗಿ ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಬರದೆ ವಾಟ್ಸ್‌ಆ್ಯಪ್ ಅಥವಾ ಇ-ಮೇಲ್ ಮಾಡಿದ್ರೆ ಸಾಕು ಜನರ ಕೆಲಸವಾಗುವಂತಹ ದಾರಿಯನ್ನು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಿಂದ ಬರುವ ಜನರಿಗೆ ತೊಂದರೆಯಾಗದಂತೆ ಈ ರೀತಿ ಮಾಡಲಾಗಿದೆ. ಜನರು ತಾವು ಇರುವ ಸ್ಥಳದಿಂದ ಒಂದು ವಾಟ್ಸ್‌ಆ್ಯಪ್ ಅಥವಾ ಇ-ಮೇಲ್ ಮೂಲಕ ತಮ್ಮ ದಾಖಲಾತಿ ಪತ್ರಗಳನ್ನು ಕಳುಹಿಸಿದ್ರೆ ಸಾಕು, ಸ್ಥಳಕ್ಕೆ ಬರುವ ಬದಲು ತಂತ್ರಜ್ಞಾನದ ಮೂಲಕವೇ ಜನರ ಕೆಲಸ ಆಗುತ್ತದೆ.
ಸರ್ಕಾರಿ ಕಚೇರಿಗಳಲ್ಲಿ ಸೋಂಕು ಕಂಡು ಬರುತ್ತಿರುವ ಹಿನ್ನೆಲೆ, ಸಾರ್ವಜನಿಕರು ದೂರದ ಊರುಗಳಿಂದ ಕಚೇರಿಗೆ ಬಾರದೇ ವಾಟ್ಸ್ಆ್ಯಪ್ ನಂಬರ್ 9449847641ಗೆ ತಮ್ಮ ಮನವಿ ಮಾಡಿಕೊಂಡ್ರೆ ಅದನ್ನು ಪರಿಶೀಲಿಸಿ, ವಾಟ್ಸ್‌ಆ್ಯಪ್ ಮೂಲಕ ಪ್ರತಿಕ್ರಿಯೆ ಕಳುಹಿಸಲಾಗುತ್ತದೆ ಎಂದರು.
ಯಾರೂ ಕೂಡ ದೂರದ ಊರಿನಿಂದ ಜಿಲ್ಲಾ ಕೇಂದ್ರಕ್ಕೆ ಬರುವುದು ಬೇಡ ಎಂದು ರೈತರಿಗೆ ಹಾಗೂ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರ ಈ ಹೊಸ ಐಡಿಯಾದಿಂದ ರೈತರು ಹಾಗೂ ಸಾರ್ವಜನಿಕರು ತಮ್ಮ ಮನೆಯಲ್ಲಿ ಕುಳಿತು ತಮ್ಮ ಕೆಲಸ ಮಾಡಿಕೊಳ್ಳಬಹುದಾಗಿದೆ.