ಹುಬ್ಬಳ್ಳಿ: ಆತ ಸ್ನೇಹಿತನಿಗೆ ಸಹಾಯ ಮಾಡಲು ಹೋಗಿದ್ದ ಯುವಕ. ಆದರೆ, ಆತನಿಗೆ ನಿಜಕ್ಕೂ ಎದುರಾಗಿದ್ದು ಮಾತ್ರ ನರಕ. ಸ್ನೇಹದ ಹೆಸರಲ್ಲಿ ಆತನಿಗೆ ಮೋಸ ಆಗಿದೆಯಂತೆ. ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕೆ ಆತನ ವಿರುದ್ಧವೇ ದೂರು ದಾಖಲಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮೋಸಕ್ಕೆ ಒಳಗಾದ ಯುವಕನ ಹೆಸರು ಆದರ್ಶ ಕಾಮತ್. ಇತ ಬಿಬಿಎ ಓದುತ್ತಿರುವ ವಿದ್ಯಾರ್ಥಿ. ದೋಸ್ತಿಗಾಗಿ ತನ್ನ ಸೀನಿಯರ್ ನಿಖಿಲ್ ಎಂಬುವವನಿಗೆ ಸಾಲದ ರೂಪದಲ್ಲಿ ಹಣ ನೀಡಿದ್ದನಂತೆ. ಆದರೆ ಕೊಟ್ಟ ಹಣವನ್ನು ಮರಳಿ ಕೇಳಿದ್ದಕ್ಕೆ ನಿಖಿಲ್ ತನ್ನ ಪರಿಚಯವಿರುವ ಸಂತೋಷ ಎಂಬ ಪೊಲೀಸ್ ಸಿಬ್ಬಂದಿ ಜೊತೆ ಸೇರಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿ ಹಾಕಿಸಿದ್ದಾರಂತೆ.
ನಾನು ಅಮಾಯಕ ನನ್ನ ಮೇಲೆ ಈ ರೀತಿ ಆರೋಪ ಮಾಡಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದು, ಈ ಕುರಿತು ಕೇಂದ್ರ ಗೃಹ ಸಚಿವರು ಅಮಿತ್ ಶಾ ಅವರಿಗೂ ಕೂಡ ಪತ್ರ ಬರೆದಿದ್ದಾನೆ. ಸ್ನೇಹಿತನಿಗೆ ಹಣ ನೀಡಿದ್ದೆ. ಆದರೆ ಮರಳಿ ಕೇಳಿದ್ದಕ್ಕೆ ನನಗೆ ಹೀಗೆ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ. ತಪ್ಪಿದ್ದರೆ ನನಗೆ ಶಿಕ್ಷೆ ನೀಡಿ ಎಂದು ಆದರ್ಶ ಕಾಮತ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ರಕ್ಷಣೆ ನೀಡಬೇಕಾದ ಆರಕ್ಷಕರೇ ಈ ರೀತಿಯಲ್ಲಿ ಹಣದ ಆಸೆಗೆ ಬಿದ್ದು ಹೀಗೆ ಮಾಡಿದ್ರಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಈಗಾಗಲೇ ಕ್ರಿಕೆಟ್ ಬೆಟ್ಟಿಂಗ್ ಕೇಸ್ನಲ್ಲಿ ಆದರ್ಶ ಹೆಸರಿನ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ. ಆದರೆ, ಇದರ ಸತ್ಯಾಸತ್ಯತೆ ಬಗ್ಗೆ ನಾನು ಹೋರಾಟ ಮಾಡಲು ಸಿದ್ದ ಅಂತಿದ್ದಾರೆ ಆದರ್ಶ.
ಒಟ್ಟಿನಲ್ಲಿ ಈ ಯುವಕ ನ್ಯಾಯಕ್ಕಾಗಿ ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರೇಟ್ ಮೆಟ್ಟಿಲೇರಿದ್ದಾನೆ. ಅಲ್ಲದೇ, ರಾಜ್ಯದ ಹಾಗೂ ಕೇಂದ್ರದ ಸಚಿವರಿಗೆ ಪತ್ರ ಬರೆದಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾನೆ. ಈ ಬಗ್ಗೆ ಪೊಲೀಸ್ ಆಯುಕ್ತರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ.
ಓದಿ: ಸ್ವತಃ ಮಾಜಿ ಸಿಎಂ ಬೇಡವೆಂದ್ರೂ ಸಿದ್ದರಾಮಯ್ಯ ಶೂ ಹಾಕಿದ ಕಾರ್ಯಕರ್ತ..