ಹುಬ್ಬಳ್ಳಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ತಹಶೀಲ್ದಾರ ಕಚೇರಿಯೆದುರು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಾಜಮಾನ್ ಮುಜಾಹಿದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇಡೀ ವಿಶ್ವವೇ ಕೋವಿಡ್‌ನಿಂದ ನಲುಗಿ ಹೋಗಿದೆ. ಭಾರತ ಸಹ ಎರಡು ತಿಂಗಳುಗಳ ಕಾಲ ಕಠಿಣ ಲಾಕ್‌ಡೌನ್‌ನಿಂದ ತತ್ತರಿಸಿದೆ. ದೇಶದ ಆರ್ಥಿಕತೆ ತೀವ್ರ ಕುಸಿತಕ್ಕೀಡಾಗಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಹಲವು ಕಾರ್ಖಾನೆಗಳು ತೆರೆಯದೆ, ವಾಹನಗಳು ಓಡಾಡದೇ ಪೆಟ್ರೋಲ್, ಡೀಸೆಲ್ ಬಳಕೆಯೂ ಕಡಿಮೆಯಾಗಿದೆ. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆ 38 ಡಾಲರ್‌ಗೆ ಕುಸಿದಿದೆ.
ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 90 -120 ಡಾಲರ್ ಇತ್ತು. ಆಗ ಇದ್ದ ಪೆಟ್ರೋಲ್ ದರ ಲೀಗೆ 65 ರೂ. ತೈಲ ಬೆಲೆ ಪಾತಾಳಕ್ಕೆ ಕುಸಿದರೂ ಬಿಜೆಪಿ ಸರ್ಕಾರ ಪೆಟ್ರೋಲ್ ದರ ಏರಿಸುತ್ತಲೇ ಇದೆ. ಕಳೆದ 16 ದಿನಗಳಲ್ಲಿ ತೈಲ ಬೆಲೆ ಲೀಟರ್ ಗೆ ಸರಾಸರಿ 10 ರೂ ಹೆಚ್ಚಾಗಿದೆ. ಈ ಕೂಡಲೇ ಸರ್ಕಾರ ತೈಲ ಬೆಲೆಯನ್ನು ಹಿಂದಕ್ಕೆ ಪಡೆದು ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವಂತೆ ರಾಷ್ಟ್ರಪತಿಗಳು ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು. ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹಾಕದಂತೆ ತಾಕೀತು ಮಾಡಬೇಕು ಎಂದು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.