ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ರೈತಪರ ಯೋಜನೆಗಳನ್ನು ತರುತ್ತಿದ್ದಾರೆ. ಹೀಗಿರುವಾಗ ಟ್ರ್ಯಾಕ್ಟರ್ ರ‍್ಯಾಲಿ ಹಾಗೂ ಇನ್ನಿತರ ಪ್ರತಿಭಟನೆ ನಡೆಸುವುದು ಸಮಂಜಸವಲ್ಲ. ಹರಿಯಾಣ ಮತ್ತು ಪಂಜಾಬ್ಲ್ಲಿ ಮಾಡಿದಂತೆ ನಮ್ಮ ರಾಜ್ಯದಲ್ಲಿಯೂ ಟ್ರ್ಯಾಕ್ಟರ್ ರ‍್ಯಾಲಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಗಣರಾಜ್ಯೋತ್ಸವದ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಯಾವ ರೈತರು ಸಹ ಈ ಕಾನೂನು ಬೇಡ ಎಂದು ಹೇಳುತ್ತಿಲ್ಲ, ಹಿಂದಿನ ಯಾವ ಸರ್ಕಾರ ಕೊಡದಷ್ಟು ನೆರವು ನಮ್ಮ ಸರ್ಕಾರ ರೈತರಿಗೆ ನೀಡುತ್ತಿದೆ. ರೈತರ ಹಿತಾಸಕ್ತಿಗಾಗಿ ಒಳ್ಳೆಯ ಕೆಲಸ ಮಾಡಲಾಗುತ್ತಿದೆ. ಇಂತಹ ವೇಳೆ ಪ್ರತಿಪಕ್ಷ ನೈತಿಕ ಬೆಂಬಲ ಕೊಡಬೇಕಿತ್ತು, ಆದರೆ, ಬೆಳಗ್ಗೆಯಿಂದ ಸಂಜೆಯವರೆಗೂ ಟೀಕೆ ಮಾಡುತ್ತಿದ್ದಾರೆ. ಮೋದಿ ಪಾರದರ್ಶಕ ಆಡಳಿತ ನೋಡಿ, ಸಹಿಸಿಕೊಳ್ಳಲಾರದೇ, ಕಾಂಗ್ರೆಸ್ ಈ ರೀತಿಯಾಗಿ ಹೋರಾಟಕ್ಕೆ ಕುಮ್ಮಕ್ಕು ಕೊಡುತ್ತಿದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ಇದನ್ನೂ ಓದಿ: ಪರೇಡ್ ಎಫೆಕ್ಟ್ : ಆಲೂಗಡ್ಡೆ ತುಂಬಿದ ಟ್ರ್ಯಾಕ್ಟರ್ಗೂ ಸಿಗಲಿಲ್ಲ ಬೆಂಗಳೂರು ಪ್ರವೇಶಕ್ಕೆ ಅನುಮತಿ
ಯಾವುದೇ ಒಂದು ಕಾಯಿದೆ ಜಾರಿಗೆ ತರುವ ಮೊದಲು ಹಲವಾರು ಬಾರಿ ಅದರ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಯಾವೊಂದು ಕಾಯಿದೆಯನ್ನೂ ಸಹ ಒತ್ತಾಯದಿಂದ ಹೇರಲಾಗುತ್ತಿಲ್ಲ. 20-30 ವರ್ಷಗಳ ಕಾಲ ಆಡಳಿತ ಮಾಡಿದವರು ರೈತರಿಗೆ ಯಾವ ಉಪಕಾರವನ್ನೂ ಸಹ ಮಾಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಉಂಟಾದ ರೈತರ ಸಾವಿಗೆ ಕಾಂಗ್ರೆಸ್ ಪಕ್ಷವೇ ನೇರ ಹೊಣೆ, ಅವರೇ ಪ್ರಚೋದನೆ ಕೊಟ್ಟು ಹೋರಾಟಕ್ಕೆ ಕಿಚ್ಚು ಹಚ್ಚಿದ್ದಾರೆ. ನಿಜವಾಗಿ ನಿದ್ದೆ ಮಾಡುವವರನ್ನು ಎಬ್ಬಿಸಬಹುದು ಆದರೆ ನಿದ್ದೆ ಮಾಡುವಂತೆ ನಾಟಕ ಮಾಡುವವರನ್ನು ಎಬ್ಬಿಸಲು ಸಾಧ್ಯವಿಲ್ಲ. ಕಾಯಿದೆ ಬಗ್ಗೆ ತಿಳವಳಿಕೆ ಮೂಡಿಸುವ ಎಲ್ಲಾ ಕೆಲಸ ನಾವು ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.