ಧಾರವಾಡ : ನುಗ್ಗಿಕೇರಿ ಧರ್ಮ ವ್ಯಾಪಾರ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮತ್ತು ಕಾಂಗ್ರೆಸ್ ಮುಖಂಡರು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರನ್ನು ಭೇಟಿ ಮಾಡಿ, ಗಲಾಟೆ ಮಾಡಿದ ಆರೋಪಿಗಳನ್ನು ಗಡಿಪಾರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮನವಿ ಸಲ್ಲಿಕೆ ಬಳಿಕ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಈ ಘಟನೆಗೆ ಪ್ರಮೋದ್ ಮುತಾಲಿಕ್ ನೇರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಶಾಂತಿಗೆ ಹೆಸರುವಾಸಿ. ಇವತ್ತು ಕರಾವಳಿಯ ಕರಿನೆರಳು ಇಲ್ಲಿ ಬೀಳಬಾರದು. ಇಲ್ಲಿ ಎಲ್ಲರೂ ಸೇರಿ ಬಾಳುತ್ತಿದ್ದೇವೆ. ಇದಕ್ಕೆ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ. ಪ್ರಮೋದ್ ಮುತಾಲಿಕ್ ಅವರನ್ನು ಗಡಿಪಾರು ಮಾಡಬೇಕು. ಆಗ ಮಾತ್ರ ಧಾರವಾಡ ಶಾಂತಿಯಿಂದ ಇರುತ್ತದೆ ಎಂದರು.
ನುಗ್ಗಿಕೇರಿ ಧರ್ಮ ವ್ಯಾಪಾರ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿ ನಿತೇಶ್ ಪಾಟೀಲ್ ಮಾತನಾಡಿ, ಆ ದೇವಸ್ಥಾನ ಖಾಸಗಿ ಟ್ರಸ್ಟ್‌ಗೆ ಸೇರಿದ್ದಾಗಿದೆ. ಖಾಸಗಿ ಜಮೀನಿನಲ್ಲೇ ದೇವಸ್ಥಾನ ಇದೆ. ಘಟನೆಯಾದ ಬಳಿಕ ನಾಲ್ವರ ಬಂಧನವಾಗಿದೆ ಎಂದರು. ದೇವಸ್ಥಾನಕ್ಕೆ ಸೂಕ್ತ ಬಂದೋಬಸ್ತ್ ಕೊಡಲಾಗಿದೆ.
ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲಿದೆ. ಗಲಾಟೆ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಏಕಾಏಕಿಯಾಗಿ ಬಂದು ಹಾಗೆ ಮಾಡಿದ್ದಾರೆ. ಗುಪ್ತಚರ ಮಾಹಿತಿಯೂ ಇರಲಿಲ್ಲ. ಯಾವುದೇ ಮುನ್ಸೂಚನೆಯೂ ಇರಲಿಲ್ಲ. ಸದ್ಯ ಕೃತ್ಯ ಮಾಡಿದವರ ಬಂಧನವಾಗಿದೆ. ತನಿಖೆ ಆಗುತ್ತದೆ ಎಂದು ಹೇಳಿದರು. ಡಿಸಿ ಭೇಟಿ ಬಳಿಕ ಮುಸ್ಲಿಂ ಹಾಗೂ ಕಾಂಗ್ರೆಸ್ ಮುಖಂಡರು ಧಾರವಾಡ ನುಗ್ಗಿಕೇರಿ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿದರು.
ಮಾಜಿ ಸಚಿವ ಎ. ಎಂ ಹಿಂಡಸಗೇರಿ ನೇತೃತ್ವದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಪರ್ಯಾಯಸ್ಥ ನರಸಿಂಹರಾವ್ ದೇಸಾಯಿ ಜೊತೆ ಮಾತುಕತೆ ನಡೆಸಿದರು. ಎಲ್ಲರೂ ಸೌಹಾರ್ದವಾಗಿ ಇರೋಣ ಎಂದ ಮುಸ್ಲಿಂ ಮುಖಂಡರು. ಈ ಬಗ್ಗೆ ಪರ್ಯಾಯಸ್ಥ ಸಕಾರಾತ್ಮಕ ಉತ್ತರ ಕೊಟ್ಟಿದ್ದಾರೆ.