ಹುಬ್ಬಳ್ಳಿ: ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಚುನಾವಣಾ ಕ್ರೀಡೆಗೆ ರನ್ನಿಂಗ್ ರೇಸ್ ಪ್ರಾಕ್ಟೀಸ್ ಮಾಡುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರವಾಹವಾಗಿ ನಷ್ಟ ಜನ ಸಂಕಷ್ಟ ಅನುಭವಿಸುತ್ತಿರುವ ಹಿನ್ನಲೆ ನಮಗೆ ರಾಜ್ಯದಲ್ಲಿ ಮರುಚುನಾವಣೆ ಬೇಡವಾಗಿದೆ. ಯಾವುದೇ ಸರ್ಕಾರವಿರಲಿ ಇನ್ನೂ ಮೂರು ವರ್ಷ ಸರಿಯಾಗಿ ನಡೆಯಲಿ ಅನ್ನೋದು ನನ್ನ ಭಾವನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ವಿಧಾನಸಭಾ ಉಪಚುನಾವಣೆ ಪೂರ್ವ ತಯಾರಿ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಈಗ ಸ್ವತಂತ್ರರಾಗಿದ್ದಾರೆ. ಚುನಾವಣೆ ರನ್ನಿಂಗ್ ರೇಸ್ ಯಾವಾಗ ಇರುತ್ತದೆ ಗೊತ್ತಿಲ್ಲ. ಆದ್ರೆ, ಸ್ಪರ್ಧಿಸುವವರು ಪ್ರಾಕ್ಟೀಸ್ ಮಾಡಲೆಬೇಕು. ಹಾಗೆಯೇ ಕಾಂಗ್ರೆಸ್ಸಿನವರು ಮಾಡುತ್ತಿದ್ದಾರೆ ಅಷ್ಟೇ. ಇನ್ನು ಬಿಜೆಪಿಗೆ ಬೆಂಬಲ ಕೊಡುವುದು ಬಿಡುವುದು ನಮ್ಮ ಹೈಕಮಾಂಡ್ಗೆ ಬಿಟ್ಟಿದ್ದು. ಒಂದು ವೇಳೆ ಬೆಂಬಲ ಕೊಟ್ಟರೆ ಅದಕ್ಕೆ ನನ್ನದೂ ಸಹಮತವಿದೆ ಎಂದರು.
ಇನ್ನು, ಹುಬ್ಬಳ್ಳಿ ಮೂರು ಸಾವಿರ ಮಠಕ್ಕೆ ದಿಂಗಾಲೇಶ್ವರ ಸ್ವಾಮೀಜಿ ಪೀಠಾಧ್ಯಕ್ಷ ವಿಚಾರವಾಗಿ ಮಾತನಾಡಿದ ಅವರು, ಮೂರು ಸಾವಿರ ಮಠದ 11 ಸ್ವಾಮೀಜಿಗಳು ಸಿಎಂ ಭೇಟಿ ಆಗಿದ್ದಾರೆ. ಆದರೆ, ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ನಮ್ಮನ್ನು ಯಾರು ಕೇಳಿಲ್ಲ ಎಂದು ಹೊರಟ್ಟಿ ತಿಳಿಸಿದರು.