ಹುಬ್ಬಳ್ಳಿ: ನಗರ ಸಾರಿಗೆಯಲ್ಲಿ ಬಸ್ ಸಂಚರಿಸುತ್ತಿದ್ದಾಗಲೇ ತಪಾಸಣಾ ಅಧಿಕಾರಿ ಬಂದ ಕೆಲವೇ ಕ್ಷಣಗಳಲ್ಲಿ ನಿರ್ವಾಹಕ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ವಿದ್ಯಾನಗರದಲ್ಲಿ ಸಂಭವಿಸಿದೆ.
ಮಹೇಶ್ ಹೂಗಾರ ಎಂಬ ನಿರ್ವಾಹಕ ಹೃದಯಾಘಾತದಿಂದ ಸಾವಿಗೀಡಾದವರು. ಹುಬ್ಬಳ್ಳಿಯ ಬಂಡಿವಾಡ ಅಗಸಿಯಿಂದ ಗಾಮನಗಟ್ಟಿಗೆ ಬಸ್ ಹೊರಟಿತ್ತು. ತಪಾಸಣಾ ಅಧಿಕಾರಿ ವಿದ್ಯಾನಗರದ ಬಳಿ ಬಸ್ ನಿಲ್ಲಿಸಿ ಟಿಕೆಟ್ ಬುಕ್ ಪಡೆಯುತ್ತಿದ್ದ ಹಾಗೆ ಕಂಡಕ್ಟರ್ ಮಹೇಶ್ ಹೂಗಾರ ಎದೆ ನೋವಿನಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ತಪಾಸಣಾ ಅಧಿಕಾರಿ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ, ಚಾಲಕ ಹರಸಾಹಸ ಮಾಡಿ ಕಿಮ್ಸ್ಗೆ ತರುವಷ್ಟರಲ್ಲಿಯೇ ನಿರ್ವಾಹಕ ಸಾವಿಗೀಡಾಗಿದ್ದಾರೆ.
ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಈಗಾಗಲೇ ಹಲವು ಸಮಸ್ಯೆಗಳನ್ನು ಸಿಬ್ಬಂದಿ ಎದುರಿಸುತ್ತಿದ್ದು, ಪ್ರತಿ ಕ್ಷಣವೂ ಆತಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದೇ ಇವತ್ತಿನ ದುರ್ಘಟನೆಗೆ ಕಾರಣವಾಗಿದೆ.