ಧಾರವಾಡ: ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಈಶಪ್ಪ ಕೆ.ಭೂತೆ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತ್‍ನ್ನು ಆಯೋಜಿಸಲಾಗಿತ್ತು.
ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ್ ಅದಾಲತ್ಗಾಗಿ ಧಾರವಾಡದಲ್ಲಿ 14 ಪೀಠಗಳನ್ನು, ಹುಬ್ಬಳ್ಳಿಯಲ್ಲಿ 18 ಪೀಠಗಳನ್ನು, ಕುಂದಗೋಳದಲ್ಲಿ 02 ಪೀಠಗಳನ್ನು, ನವಲಗುಂದ ಮತ್ತು ಕಲಘಟಗಿಯಲ್ಲಿ ತಲಾ 01 ಪೀಠವನ್ನು ಸ್ಥಾಪಿಸಲಾಗಿತ್ತು. ವಿವಿಧ ರೀತಿಯ ಸುಮಾರು 7,009 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಆ ಪೀಠಗಳಲ್ಲಿ ತೆಗೆದುಕೊಂಡು ಅವುಗಳ ಪೈಕಿ 1,666 ಚಾಲ್ತಿ ಇರುವ ಪ್ರಕರಣಗಳನ್ನು ಹಾಗೂ 309 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಲಾಯಿತು. ಈ ವೇಳೆ ಸುಮಾರು 17 ಕೋಟಿ ಮೊತ್ತವನ್ನು ವಸೂಲು ಮಾಡಲಾಗಿದೆ.
ಲೋಕ ಅದಾಲತ್‍ನಲ್ಲಿ ಧಾರವಾಡ ಜಿಲ್ಲೆಯ ಎಲ್ಲ ನ್ಯಾಯಾಧೀಶರು, ವಿವಿಧ ವಿಮೆ ಕಂಪನಿಯ ಅಧಿಕಾರಿಗಳು, ವಿಮೆ ಕಂಪನಿಯ ಪ್ಯಾನಲ್ ವಕೀಲರುಗಳು, ಅರ್ಜಿದಾರರ ಪರ ವಕೀಲರುಗಳು, ಎನ್.ಡಬ್ಲೂ.ಕೆ.ಆರ್.ಟಿ.ಸಿ. ಅಧಿಕಾರಿಗಳು, ಕಕ್ಷಿದಾರರು, ವಕೀಲರು ಹಾಗೂ ಧಾರವಾಡ ಜಿಲ್ಲಾ ನ್ಯಾಯಾಂಗ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಚಿಣ್ಣನ್ನವರ್ ಆರ್.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.