ಹುಬ್ಬಳ್ಳಿ: ಸಂಚಾರಕ್ಕೆ ಸಮಸ್ಯೆಯಾಗುವಂತೆ ನಿಲ್ಲಿಸಿದ್ದ ಬೈಕ್ ಪಕ್ಕಕ್ಕೆ ಸರಿಸಿ ಎಂದು ಹೇಳಿದ್ದಕ್ಕೆ ಸಾರ್ವಜನಿಕನ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರೂರ ಪಾರ್ಕ್‌ನ ಕರುಣಾಕರ ಶೆಟ್ಟಿ ಎಂಬುವವರ ಮೇಲೆ ಧಾರವಾಡದ ಉಪನಗರ ಠಾಣೆಯ ಕಾನ್‌ಸ್ಟೇಬಲ್ ಹುಲಿಗೆಪ್ಪ ವಡ್ಡರ ಹಲ್ಲೆ ನಡೆಸಿದ್ದರು. ಕಾನ್‌ಸ್ಟೇಬಲ್ ಶಿರೂರ ಪಾರ್ಕ್ ಕ್ರಾಸ್ ಬಳಿ ಸಂಚಾರಕ್ಕೆ ಅಡಚಣೆಯಾಗುವಂತೆ ಬೈಕ್ ನಿಲ್ಲಿಸಿದ್ದರು. ಅದೇ ಮಾರ್ಗದಲ್ಲಿ ಕರುಣಾಕರ ಅವರು ಬೈಕ್ ಮೇಲೆ ತೆರಳುವಾಗ ಪಕ್ಕಕ್ಕೆ ಸರಿಯಿರಿ ಎಂದು ಹೇಳಿ ಮುಂದೆ ಹೋಗಿದ್ದಾರೆ. ನಂತರ ಪೊಲೀಸ್, ಕರುಣಾಕರ ಅವರನ್ನು ಹಿಂಬಾಲಿಸಿ ಬೈಕ್ ಅಡ್ಡಗಟ್ಟಿ, ‘ನೀನು ಯಾರಿಗೆ ಪ್ರಶ್ನಿಸುತ್ತಿರೋದು? ನಾನು ಯಾರು ಗೊತ್ತಾ, ನಾನು ಪೊಲೀಸ್ ಇಲಾಖೆ ನೌಕರ, ನನ್ನನ್ನು ಏನೂ ಮಾಡಲೂ ಸಾಧ್ಯವಿಲ್ಲ’ ಎಂದು ಲಾಠಿಯಿಂದ ಕರುಣಾಕರ ಅವರ ಬಲಗೈಗೆ ಹೊಡೆದಿದ್ದಾರೆ ಎಂದು ಅವರ ಪುತ್ರ ಅಮಿತ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.