ಹುಬ್ಬಳ್ಳಿ : ಕೇಶ್ವಾಪೂರ ಠಾಣೆ ವ್ಯಾಪ್ತಿಯಲ್ಲಿ ನಡೆದ ಉದ್ಯಮಿ ಪುತ್ರನ ಕೊಲೆ ಪ್ರಕರಣದಲ್ಲಿ ಏಳು ಜನರನ್ನು ವಶಕ್ಕೆ ಪಡೆಯಲಾಗಿದೆ. ಸವಾಲಾಗಿರುವ ಈ ಪ್ರಕರಣವನ್ನು ನಮ್ಮ ಪೊಲೀಸರು ಭೇದಿಸಿದ್ದಾರೆ. ಕೇಶ್ವಾಪೂರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಇನ್ನೂ ತನಿಖೆ ಹಂತದಲ್ಲಿ ಇರುವುದರಿಂದ ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬೂರಾಮ್ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉದ್ಯಮಿ ಪುತ್ರನ ನಾಪತ್ತೆ ಬಗ್ಗೆ ಕೆಲವರು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಯುವಕನ ಮಿಸ್ಸಿಂಗ್ ಬಹಳ ಅನುಮಾನ ಮೂಡಿಸಿತ್ತು. ಆಗ ನಮ್ಮ ಸಿಬ್ಬಂದಿ ಯುವಕನ ತಂದೆಯನ್ನು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ವ್ಯಾಪಾರದ ಉದ್ದೇಶಕ್ಕಾಗಿ ಕಲಘಟಗಿಗೆ ತಂದೆ ಮಗ ಇಬ್ಬರು ಹೋಗಿ, ತಂದೆ ಮಾತ್ರ ವಾಪಸ್ ಆಗಿದ್ದ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು ಎಂದರು.
ಉಸಿರುಗಟ್ಟಿಸಿ ಯುವಕನನ್ನು ಕೊಲೆ: ವ್ಯಾಪಾರಕ್ಕಾಗಿ ಕಲಘಟಗಿಗೆ ಕರೆದುಕೊಂಡು ಹೋಗಿ ಕೊಲೆ ಮಾಡಲಾಗಿದೆ. ತಂದೆಯನ್ನು ತೀವ್ರ ವಿಚಾರಣೆ ಮಾಡಿದಾಗ ಸತ್ಯ ಬಯಲಾಗಿದೆ. ಈಗಾಗಲೇ ಏಳು ಜನರನ್ನ ಬಂಧಿಸಿದ್ದೇವೆ. ಉಸಿರುಗಟ್ಟಿಸಿ ಯುವಕನನ್ನು ಕೊಲೆ ಮಾಡಿದ್ದಾರೆ. ನಮ್ಮ ಸಿಬ್ಬಂದಿ ಭರತ ಜೈನ್ ವಿಚಾರಣೆ ನಡೆಸಿದಾಗ ಪ್ರಕರಣವನ್ನ ದಿಕ್ಕು ತಪ್ಪಿಸಲು ನೋಡಿದ್ದು, ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ತನಿಖೆಗೆ ಪುಷ್ಟಿ ಬಂತು ಎಂದು ಅವರು ಹೇಳಿದರು.
ತಂದೆಯೇ ಮಗನನ್ನ ಕೊಲೆ ಮಾಡಿಸಿದ್ದು ದೃಢ: ವೈಯಕ್ತಿಕ ಕಾರಣಗಳಿಂದ ತಂದೆಯೇ ಮಗನನ್ನ ಕೊಲೆ ಮಾಡಿಸಿದ್ದು ದೃಢವಾಗಿದೆ. ಇನ್ನೂ ಏಳು ಆರೋಪಿಗಳ ವಿಚಾರಣೆ ಮುಂದುವರೆದಿದೆ. ವಿಚಾರಣೆ ನಂತರ ಕೊಲೆಗೆ ಮೂಲ ಕಾರಣ ಗೊತ್ತಾಗಲಿದೆ ಎಂದರು. ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಬಹುಮಾನ ಘೋಷಣೆ ಮಾಡಿದರು.
ಪ್ರಕರಣ ಬೇಧಿಸಿದ ಖಾಕಿಗೆ ಅಭಿನಂದನೆ: ಅಖಿಲ್ ಜೈನ್ ಕೊಲೆ ಪ್ರಕರಣ ಬೇಧಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಪೊಲೀಸ್ ಅಧಿಕಾರಿಗಳಿಗೆ ಆಯುಕ್ತ ಲಾಬೂರಾಮ್ ಅವರು ನಗದು ಬಹುಮಾನ ವಿತರಿಸಿ ಅಭಿನಂದಿಸಿದರು. ಕಾರ್ಯಾಚರಣೆಯಲ್ಲಿ ಎಸಿಪಿಗಳಾದ ವಿನೋದ ಮುಕ್ತೇದಾರ ಹಾಗೂ ಕೇಶ್ವಾಪೂರ, ಗೋಕುಲ ರೋಡ್, ಎಪಿಎಂಸಿ, ಹುಬ್ಬಳ್ಳಿ ಶಹರ, ಬೆಂಡಿಗೇರಿ ಹಾಗೂ ಮಹಿಳಾ ಪೊಲೀಸ್ ಠಾಣೆ ಅಧಿಕಾರಿಗಳ ಕಾರ್ಯವೈಖರಿಯನ್ನು ಆಯುಕ್ತರು ಶ್ಲಾಘಿಸಿದರು.
ಓದಿ: ಉದ್ಯಮಿ ಪುತ್ರನ ಕೊಲೆ ಕೇಸ್: ಮಗನ ಹತ್ಯೆಗೆ ತಂದೆಯಿಂದ ಸುಪಾರಿ, ಶವ ಹೂತಿರುವ ಸ್ಥಳ ಪತ್ತೆ