ಹುಬ್ಬಳ್ಳಿ: ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಸುವ ನೀರಸಾಗರ ಜಲಾಶಯದ ಕೆಳಭಾಗದ ಸುತ್ತಮುತ್ತ ಒತ್ತುವರಿಯಾಗಿದ್ದ ಸುಮಾರು 23.5 ಎಕರೆ ಭೂಮಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ಇಂದು ಪ್ರಾರಂಭವಾಗಿದೆ.
ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಸೂಚನೆಯಂತೆ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಒತ್ತುವರಿ ತೆರವುಗೊಳಿಸಿ ತಗ್ಗು ತೋಡಿ ಗಡಿಯುದ್ದಕ್ಕೂ ತಂತಿಬೇಲಿ ನಿರ್ಮಿಸಲಾಗುವುದು. ಜಲಾನಯನ ಪ್ರದೇಶದಲ್ಲಿ ಗಿಡ ನೆಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ್ ತಿಳಿಸಿದ್ದಾರೆ.
ಧಾರವಾಡ ತಹಸೀಲ್ದಾರ್ ಪ್ರಕಾಶ ಕುದರಿ, ಕಲಘಟಗಿ ತಹಸೀಲ್ದಾರ್ ಅಶೋಕ ಶಿಗ್ಗಾಂವ್ ಸೇರಿದಂತೆ ನಗರ ನೀರು ಸರಬರಾಜು ಮಂಡಳಿ, ಅರಣ್ಯ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.