ಬೆಂಗಳೂರು/ಧಾರವಾಡ: ರಾಜ್ಯಾದ್ಯಂತ ನವೆಂಬರ್ 22 ರವರೆಗೆ ಭಾರಿ ಮಳೆಯ ಮುನ್ಸೂಚನೆ (Heavy Rainfall to continue in Karnataka) ಹಿನ್ನೆಲೆಯಲ್ಲಿ ರಾಜ್ಯದ 11 ಜಿಲ್ಲೆಗಳಲ್ಲಿ ನೀಡಲಾಗಿದ್ದ ಯೆಲ್ಲೋ ಅಲರ್ಟ್ ಅನ್ನು ಅತಿ ಭಾರಿ ಮಳೆಯ ಆರೆಂಜ್ ಅಲರ್ಟ್ ಆಗಿ ಪರಿವರ್ತಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ತುಮಕೂರು, ಶಿವಮೊಗ್ಗ, ಮಂಡ್ಯ, ಕೋಲಾರ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಿಗೆ ಸೀಮಿತವಾಗಿದ್ದ ಯೆಲ್ಲೋ ಅಲರ್ಟ್ ಅನ್ನು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಇನ್ನೆರಡು ದಿನ ಸಾಧಾರಣ ಮಳೆಯಾಗಲಿದ್ದು, ನವೆಂಬರ್ 20ರಂದು ಅಧಿಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣದ ಎರಡೂ ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತ:
ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿ, ಟ್ರಫ್ ಮತ್ತು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ಮತ್ತು ಒಳನಾಡಿನಲ್ಲಿ ಮಳೆ ಅಬ್ಬರಿಸುತ್ತಿದೆ ಎಂದು ಮಾಹಿತಿ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ:
ಕರಾವಳಿಯಲ್ಲಿ ಗಂಟೆಗೆ 40 ರಿಂದ 60 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.