ಹುಬ್ಬಳ್ಳಿ: ಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರೋ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ ಎಂದು ಬಜರಂಗದಳದ ವಿಚಾರದಲ್ಲಿ ಡಿಕೆಶಿ ಎತ್ತಿದ ಪ್ರಶ್ನೆಗೆ ಬೊಮ್ಮಾಯಿ ಕಿಡಿ ಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜರಂಗ ದಳಕ್ಕೆ ಆಂಜನೇಯಗೆ ಏನು ಸಂಬಂಧ ಅಂತ ಡಿಕೆಶಿ ಪ್ರಶ್ನಿಸ್ತಾರೆ. ರಾಮನಿಗೂ ಹನುಮನಿಗೂ ಏನು ಸಂಬಂಧ ಇದೆಯೋ ಅದೇ ಸಂಬಂಧ ಆಂಜನೇಯನಿಗೂ ಬಜರಂಗ ದಳಕ್ಕಿದೆ. ಇದನ್ನು ಕಾಂಗ್ರೆಸ್ನವರು ಅರ್ಥ ಮಾಡಿಕೊಳ್ಳಬೇಕು. ಜನರ ಭಾವನೆಗಳ ಧಕ್ಕೆ ಬರೋ ರೀತಿಯಲ್ಲಿ ಮಾತನಾಡೋದು ಸರಿಯಲ್ಲ ಎಂದು ಹರಿಹಾಯ್ದರು.
ನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಅವರು ಅವರ ಭರವಸೆಗಳ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಅನವಶ್ಯಕವಾಗಿ ಕೆದಕಿ ಕೆದಕಿ ಚುನಾವಣೆಯ ವಾತಾವರಣವನ್ನು ಜಾತಿ, ಧರ್ಮ, ಕೋಮು ಭಾವನೆ ಕೆರಳಿಸೋದು ಸರಿಯಲ್ಲ. ಇದು ಕಾಂಗ್ರೆಸ್ನ ತುಷ್ಟೀಕರಣ ರಾಜಕಾರಣ ತೋರ್ಪಡಿಸುತ್ತೆ. ಕಾಂಗ್ರೆಸ್ ಪಕ್ಷ ಇವತ್ತು ಎಸ್ಡಿಪಿಐ ಮತ್ತು ಪಿಎಫ್ಐ ಕಪಿ ಮುಷ್ಟಿಯಲ್ಲಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಆ ಮುಷ್ಟಿಯಿಂದ ಹೊರಬರಲು ಸಾಧ್ಯವಿಲ್ಲ, ಅವರ ಒತ್ತಡಕ್ಕೆ ಮಣಿಯುತ್ತಿದ್ದಾರೆ. ನಾವು ಎಸ್ಡಿಪಿಐ, ಪಿಎಫ್ಐ ವಿರುದ್ಧ ಏನಾದರು ಮಾಡುತ್ತೇವೆ ಅಂದರೆ ಕಾಂಗ್ರೆಸ್ ನಾಯಕರಿಗೆ ತಳಮಳ ಶುರುವಾಗುತ್ತೆ. ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡ್ತಿದೆ. ಪಿಎಫ್ಐ ಬ್ಯಾನ್ ಆಗಿದ್ದರೂ ತಮ್ಮ ಪರವಾಗಿ ಮಾತನಾಡುತ್ತಿಲ್ಲ ಅಂತ ಪಿಎಫ್ಐಗೆ ಕಾಂಗ್ರೆಸ್ ಮೇಲೆ ಅಸಮಾಧಾನ ಇದೆ.
ಕಾಂಗ್ರೆಸ್ನವರು ನಮಗೆ ರಕ್ಷಣೆ ಕೊಡ್ತಿಲ್ಲ, ನಾವ್ಯಾಕೆ ನಿಮಗೆ ರಕ್ಷಣೆ ಕೊಡಬೇಕು ಅಂತ ಪಿಎಫ್ಐ ನಾಯಕರು ಪ್ರಶ್ನಿಸುತ್ತಿದ್ದಾರೆ. ಪಿಎಫ್ಐನ ಇನ್ನೊಂದು ರೂಪ ಎಸ್ಡಿಪಿಐ. ಎಸ್ಡಿ ಪಿ ಐ ಬೆಂಬಲವನ್ನು ಕಾಂಗ್ರೆಸ್ ಬಹಿರಂಗವಾಗಿ ಕೇಳಿತ್ತು. ಆದರೆ, ಅವರು ಕೊಡಲ್ಲ ಅಂದಿದ್ದಾರೆ. ಕಾಂಗ್ರೆಸ್ನ ಕಾಲದಲ್ಲಿ ಎಸ್ಡಿಪಿಐ, ಪಿಎಫ್ಐ ಪ್ರಬಲವಾಗಿ ಬೆಳೆದಿದ್ದವು ಎಂದರು.
ಈಗ ದೊಡ್ಡ ಪ್ರಮಾಣದಲ್ಲಿ ಎಸ್ಡಿಪಿಐ ಬೆಳೆದಿದೆ. ಹಾಗಾಗಿ ಬಾಲವೇ ದೇಹವನ್ನು ಅಲುಗಾಡಿಸಿದಂತಹ ಸ್ಥಿತಿ ಇದೆ. ಇದರಿಂದ ಕಾಂಗ್ರೆಸ್ ಪಕ್ಷ ಇವತ್ತು ಎಸ್ಡಿಪಿಐ ಮತ್ತು ಪಿಎಫ್ಐ ಕಪಿ ಮುಷ್ಟಿಯಲ್ಲಿದೆ. ಎಸ್ಡಿಪಿಐ ಬಿಜೆಪಿಯ ಬಿ ಟೀಂ ಅಲ್ಲ ಬಿ ಟೀಂ ಆಗಿದ್ದರೆ ನಾವು ಪಿಎಫ್ಐ ಬ್ಯಾನ್ ಮಾಡ್ತಿದ್ದೆವಾ. ತಾವು ಮಾಡಿದ ತಪ್ಪನ್ನು ಮುಚ್ಚಲು ಈ ರೀತಿಯ ಆರೋಪ ಮಾಡ್ತಿದಾರೆ ಎಂದರು.
ಸೋನಿಯಾಗಾಂಧಿ ಹುಬ್ಬಳ್ಳಿ ಭೇಟಿ ವಿಚಾರಕ್ಕೆ ಮಾತನಾಡಿದ ಅವರು, ಸೋನಿಯಾಗಾಂಧಿ ಬರಲಿ ನಾವು ಕಾಂಗ್ರೆಸ್ ನಾಯಕರ ರೀತಿ ಅಳೋಲ್ಲ, ಕಂಪ್ಲೇಟ್ ಮಾಡುವುದಿಲ್ಲ. ಮೋದಿ, ಅಮಿತ್ ಶಾ ಯಾಕೆ ಬಂದರು ಅಂತ ಕಾಂಗ್ರೆಸ್ನವರು ಕೇಳಿದಂತೆ ನಾವು ಕೇಳಲ್ಲ. ರಾಹುಲ್ ಗಾಂಧಿ ಬಂದಾಗಲು ನಾನು ಸ್ವಾಗತಿಸಿದ್ದೆ. ಸೋನಿಯಾ ಗಾಂಧಿ ಬಂದರು ಸ್ವಾಗತ ಮಾಡುತ್ತೇನೆ. ಜನರಿಗೆ ಯಾವ್ಯಾವ ರಾಷ್ಟ್ರೀಯ ನಾಯಕರು ಬದ್ಧತೆಯಲ್ಲಿ ಇದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿ ಮುನ್ನಡೆದರು.
ಇದನ್ನೂ ಓದಿ: ಬಜರಂಗದಳ ನಿಷೇಧ ಯಾರಿಂದಲೂ ಸಾಧ್ಯವಿಲ್ಲ: ಕಾಂಗ್ರೆಸ್ ವಿರುದ್ಧ ಬಿಎಸ್ ಯಡಿಯೂರಪ್ಪ ಕಿಡಿ