ಹುಬ್ಬಳ್ಳಿ: "ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಿ ಸಂಚಲನ ಉಂಟು ಮಾಡಿದ್ದಾರೆ. ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಗಟ್ಟಿಯಾಗಿದೆ. ಅದಕ್ಕೆ ಶಾ ಅವರು ಇನ್ನಷ್ಟು ಶಕ್ತಿ, ಹುರುಪು ಕೊಟ್ಟಿದ್ದಾರೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, "ಯಾರು ಏನೇ ಹೇಳಲಿ, ರಿಯಾಲಿಟಿ ಬೇರೆಯೇ ಇದೆ. ಕಾಂಗ್ರೆಸ್‌ನವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಎಂದು ಪೋಸ್ ಕೊಡುತ್ತಿದ್ದಾರೆ. ಅದರೆ ನಮ್ಮ ಗೆಲುವು ಖಂಡಿತ" ಎಂದರು.
"ಅಮಿತ್ ಶಾ ನಿನ್ನೆ ಒಂದು ದಿನದ ಭೇಟಿಯಿಂದ ಸಂಚಲನ ಮೂಡಿಸಿದ್ದಾರೆ. ಭಾರತೀಯ ಜನತಾ ಪಕ್ಷ ಗಟ್ಟಿಯಾಗಿದೆ, ಪ್ರಬಲವಾಗಿದೆ. ಇನ್ನಷ್ಟು ಶಕ್ತಿ, ಹುರುಪು, ಹುಮ್ಮಸ್ಸನ್ನು ಅವರು ಕೊಟ್ಟಿದ್ದಾರೆ. ಸಾರ್ವಜನಿಕರಲ್ಲಿರುವ ಭಾವನೆಗಳು ಅವರ ಎಲ್ಲಾ ಸಭೆಗಳಲ್ಲಿಯೂ ವ್ಯಕ್ತವಾಗಿದೆ. ಇದರಿಂದಾಗಿ ಕರ್ನಾಟಕದಲ್ಲಿ ಬಿಜೆಪಿ ಅಲೆ ಎದ್ದಿರುವುದು ಸ್ಪಷ್ಟ" ಎಂದು ಹೇಳಿದರು.
"ಕಾಂಗ್ರೆಸ್ ಪಕ್ಷದವರು ನಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಎನ್ನುವಂತೆ ಪೋಸ್ ಕೊಡುತ್ತಿದ್ದಾರೆ. ಆದರೆ ಗ್ರೌಂಡ್ ರಿಯಾಲಿಟಿ ಬೇರೆ ಇದೆ. ನಮ್ಮ ನಾಯಕರು ಆಗಮಿಸಿದಾಗ ಸತ್ಯ ಅಭಿವ್ಯಕ್ತವಾಗುತ್ತಿದೆ. ನಮ್ಮ ಪಕ್ಷದ ಕಾರ್ಯಕ್ರಮಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅಷ್ಟೇ ಅಲ್ಲ. ಅದು ಸ್ಫೂರ್ತಿ, ಹುರುಪು ಮೂಡಿಸುತ್ತಿದ್ದು ನಮ್ಮ ಗೆಲುವನ್ನು ಹೇಳುತ್ತಿದೆ. ನಮ್ಮ ಪಕ್ಷ ಸಂಘಟನೆ ಬೂತ್ ಮಟ್ಟದಿಂದ ಪ್ರಬಲವಾಗಿದೆ. ಅದುವೇ ನಮಗೆ ಆಧಾರ, ಅದೇ ನಮ್ಮ ಶಕ್ತಿ" ಎಂದು ತಿಳಿಸಿದರು.
"ಅಮಿತ್ ಶಾ ರಾಜ್ಯ ನಾಯಕರಿಗೆ ವಿಶೇಷ ಸೂಚನೆ ನೀಡಿಲ್ಲ. ಆದರೆ ಚುನಾವಣೆ ತಯಾರಿ ರಾಜ್ಯಮಟ್ಟದಲ್ಲಿ ಮಾಡಬೇಕು" ಎಂದು ತಿಳಿಸಿದ್ದಾರೆ. "ನಾನು ಕಳೆದ ಒಂದೂವರೆ ವರ್ಷದಿಂದ ಆರೋಪ, ಪ್ರತ್ಯಾರೋಪಗಳಿಗೆ ಸಂಯಮದಿಂದ ಉತ್ತರ ಕೊಟ್ಟಿದ್ದೇನೆ. ನಮ್ಮ ಕರ್ನಾಟಕ ರಾಜಕಾರಣ ಸಂಸ್ಕೃತಿ ವ್ಯಕ್ತಿ ಆಧಾರಿತವಾಗಿಲ್ಲ, ದೇಶ ಆಧಾರಿತವಾಗಿಲ್ಲ, ವಿಷಯಾಧಾರಿತವಾಗಿದೆ, ಅಭಿವೃದ್ಧಿ ಆಧಾರಿತವಾಗಿದೆ. ಹೀಗಾಗಿ ನಾವು ಕೇಂದ್ರ ರಾಜ್ಯ ಸರ್ಕಾರದ ಸಾಧನೆಗಳನ್ನು ಇಟ್ಟುಕೊಂಡೇ ಜನರ ಬಳಿ ಹೋಗುತ್ತಿದ್ದೇವೆ."
"ಕಾಂಗ್ರೆಸ್ ಬಹಳ ಹತಾಶೆಗೆ ಒಳಗಾಗಿದೆ. ಅದು ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗುತ್ತಿದೆ. ಇಷ್ಟು ವರ್ಷದ ರಾಜಕೀಯದಲ್ಲಿ ಎಂದೂ ಬಳಸದ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ. ಆದರೆ ನಾನು ಸಂಯಮದಿಂದ ಇದ್ದೇನೆ" ಎಂದರು. "ಬೆಳಗಾವಿಯಲ್ಲಿ ಭಿನ್ನಮತ ಇಲ್ಲ. ಸಂತೋಷ್ ಅವರು ಸಂಘಟನಾತ್ಮಕ ವಿಷಯವಾಗಿ ಭೇಟಿ ಮಾಡುತ್ತಿದ್ದಾರೆ. ಚುನಾವಣೆ ಅಭ್ಯರ್ಥಿಗಳ ಪಟ್ಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸರ್ವೆ ಕಾರ್ಯ ನಡೀತಿದೆ. ಆದರೆ ಯಾವುದೂ ಅಂತಿಮ ಅಲ್ಲ. ಗೋ ಬ್ಯಾಕ್ ಅಶೋಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, "ಯಾರೋ ನಾಲಕ್ಕು ಜನ ಈ ರೀತಿಯಾಗಿ ಮಾಡುತ್ತಾರೆ" ಎಂದು ಹೇಳಿ ಮುನ್ನಡೆದರು.
ಇದನ್ನೂ ಓದಿ: ಬಿಜೆಪಿ ಪರ ಅಲೆ ಸೃಷ್ಟಿಸಲು ಕಸರತ್ತು: ಮೋದಿ, ಶಾ, ನಡ್ಡಾ, ಯೋಗಿ ತಂಡದಿಂದ ಪ್ರಚಾರಕ್ಕೆ ಪ್ಲಾನ್