ಹುಬ್ಬಳ್ಳಿ: ರಾಜಕಾರಣಕ್ಕೂ ಜಾತಿಗೂ ಎಲ್ಲಿಲ್ಲದ ನಂಟು. ಜಾತಿ ಇಲ್ಲದೇ ರಾಜಕಾರಣ ಮಾಡಲು ಸಾಧ್ಯವಿಲ್ಲ ಎನ್ನುವುದನ್ನು ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿನ 82 ವಾರ್ಡ್ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಬಹುತೇಕ ಎಲ್ಲಾ ಜಾತಿಯ ಜನರಿಗೆ ಟಿಕೆಟ್ ನೀಡಿದ್ದರೂ ಹೆಚ್ಚಿನದಾಗಿ ಬಹುಸಂಖ್ಯಾತ ಲಿಂಗಾಯತರಿಗೆ ಮಣೆ ಹಾಕಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿ ಲಿಂಗಾಯತ ಸಮಾಜದ 15 ಪುರುಷರು ಮತ್ತು 12 ಮಹಿಳೆಯರು ಸೇರಿ 22 ಜನರಿಗೆ ಟಿಕೆಟ್ ನೀಡಿದ್ದರೆ, ಕಾಂಗ್ರೆಸ್ ಸಹ ಲಿಂಗಾಯತ ಸಮುದಾಯದ 12 ಮಂದಿ ಪುರುಷರು ಮತ್ತು 08 ಮಹಿಳೆಯರಿಗೆ ಮಣೆ ಹಾಕಿದೆ.
ಕಾಂಗ್ರೆಸ್ ಟಿಕೆಟ್ ಪಡೆದವರಲ್ಲಿ ಮುಸ್ಲಿಂ ಸಮುದಾಯ ಎರಡನೇ ಸ್ಥಾನದಲ್ಲಿದ್ದು, 10 ಮಹಿಳೆಯರು ಮತ್ತು 7 ಪುರುಷರಿದ್ದಾರೆ. ಮೂರನೇ ಸ್ಥಾನದಲ್ಲಿ ಕುರುಬ ಸಮುದಾಯಕ್ಕೆ 8 ಸ್ಥಾನ ನೀಡಿದ್ದು, ಐವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ನಿಂದ ಮೂವರು ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮರಾಠ ಸಮಾಜದ 7 ಜನ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಎಸ್ ಸಿ, ಎಸ್ ಟಿ ಸಮುದಾಯದ 16 ಜನರಿಗೆ ಸ್ಪರ್ಧೆಗೆ ಅವಕಾಶ ಸಿಕ್ಕಿದೆ.
ಬಿಜೆಪಿಯಲ್ಲಿ 7 ಜನ ಬ್ರಾಹ್ಮಣರಿಗೆ ಟಿಕೆಟ್ ನೀಡಲಾಗಿದ್ದು, ಕುರುಬ ಸಮುದಾಯದ ಐವರಿಗೆ ಟಿಕೆಟ್ ನೀಡಲಾಗಿದೆ. ಮರಾಠ ಸಮುದಾಯದ 6 ಜನರಿಗೆ ಮಣೆ ಹಾಕಲಾಗಿದ್ದು, ಕೊರಮ, ಮಾದರ, ಮಡಿವಾಳ, ಬೋವಿ ವಡ್ಡರ, ಗೊಲ್ಲ, ಗೌಳಿ, ಸಮಗಾರ ಮುಂತಾದ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಸ್ ಎಸ್ ಕೆ ಸಮಾಜ ನಿರ್ಣಾಯಕವಾಗಿದೆ. ಆದ್ರೆ ಈ ಬಾರಿ ಪ್ರಬಲ ಸಹಸ್ರಾರ್ಜುನ ಕ್ಷತ್ರಿಯ ಸಮಾಜವನ್ನು ಬಿಜೆಪಿ ಕಡೆಗಣನೆ ಮಾಡಿದೆ. ಸಹಸ್ರಾರ್ಜುನ ಕ್ಷತ್ರಿಯ ಸಮಾಜಕ್ಕೆ ಬಿಜೆಪಿ 4 ಸ್ಥಾನ ನೀಡಿದ್ದರೆ, ಕಾಂಗ್ರೆಸ್ ಸಹ ಮೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಮ್ಮ ಸಮುದಾಯಕ್ಕೆ ಕನಿಷ್ಠ 10 ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಸಮಾಜದ ಪ್ರಮುಖರು ಇಟ್ಟಿದ್ದರೂ ಕೂಡ ಕೇವಲ 4 ಸ್ಥಾನ ನೀಡಿರುವುದು ಸಮಾಜದ ಅಸಮಾಧಾನಕ್ಕೆ ಕಾರಣವಾಗಿದೆ.