ಧಾರವಾಡ: ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದ ಘಟನೆ ನಗರದ ಕಮಲಾಪುರ ಹೊರವಲಯದಲ್ಲಿ ಕಳೆದ ರಾತ್ರಿ ನಡೆದಿದೆ. ಮಹಮ್ಮದ್ ಕುಡಚಿ ಕೊಲೆಯಾದ ರಿಯಲ್ ಎಸ್ಟೇಟ್ ಉದ್ಯಮಿ. ಇವರ ಕುಡಚಿ ಮನೆ ಎದುರು ಘಟನೆ ನಡೆದಿದೆ. ರಾತ್ರಿ 10 ರಿಂದ 11 ಗಂಟೆಯ ಸುಮಾರಿಗೆ ಮನೆ ಎದುರು ಕುಳಿತಿದ್ದಾಗ ದುಷ್ಕರ್ಮಿಗಳ ಗುಂಪೊಂದು ಸ್ಥಳಕ್ಕೆ ಧಾವಿಸಿ ಬಂದು ಏಕಾಏಕಿ ದಾಳಿ ಮಾಡಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ನಡೆದ ಕುಡಚಿ ನಿವಾಸದ ಅನತಿ ದೂರದಲ್ಲಿಯೇ ಮತ್ತೊಂದು ಅಪರಿಚಿತ ಶವ ಪತ್ತೆಯಾಗಿದೆ. ಮೃತದೇಹ ರಕ್ತಸಿಕ್ತ ಸ್ಥಿತಿಯಲ್ಲಿತ್ತು. ಈತ ಕುಡಚಿ ಮನೆಯಿಂದಲೇ ಓಡಿ ಹೋಗಿರುವ ವ್ಯಕ್ತಿ ಎಂದು ಹೇಳಲಾಗುತ್ತಿದೆ. ಮಹಮ್ಮದ್ ಮೃತದೇಹವು ಅವರ ಮನೆಯ ಬೆಡ್ರೂಂನಲ್ಲಿ ಪತ್ತೆಯಾಗಿದೆ. ಪತ್ನಿ ಸೇರಿದಂತೆ ಸಂಬಂಧಿಕರ ರೋದನೆ ಮುಗಿಲು ಮುಟ್ಟುವಂತಿತ್ತು.
ಘಟನಾ ಸ್ಥಳದಿಂದ ದಾರಿಯುದ್ದಕ್ಕೂ ರಕ್ತ ಹರಿದಿದ್ದು ಕೊಲೆಯಾಗಿರುವ ಮತ್ತೊಬ್ಬನ ಹೆಸರು ತಿಳಿದು ಬಂದಿಲ್ಲ. ಉಪನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ರಮಣ ಗುಪ್ತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ರಮಣ ಗುಪ್ತಾ, "ಧಾರವಾಡದ ಕಮಲಾಪೂರದಲ್ಲಿ ಡಬಲ್ ಮರ್ಡರ್ ನಡಿದೆ. ನಾನು ಹಾಗೂ ಹಿರಿಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದೇವೆ. ಫಿಂಗರ್ ಪ್ರಿಂಟ್ ಎಕ್ಸ್‌ಪರ್ಟ್ಸ್ ಹಾಗೂ ಡಾಗ್ ಸ್ಕ್ಯಾಡ್ಗಳಿಂದ ತನಿಖೆ ನಡೆಸಿದ್ದೇವೆ. ಆರೋಪಿಗಳ ಬಂಧನಕ್ಕೆ ಪ್ರಯತ್ನ ಮಾಡ್ತೇವೆ" ಎಂದು ಮಾಹಿತಿ ನೀಡಿದರು.
ಆರೋಪಿಗಳನ್ನು ಸೆರೆ ಹಿಡಿಯಲು ಬೇರೆ ಬೇರೆ ತನಿಖಾ ತಂಡಗಳನ್ನು ರಚನೆ ಮಾಡಿದ್ದೇವೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ. ತಕ್ಷಣ ಯಾವುದೇ ಮಾಹಿತಿ ಸಿಕ್ಕಿಲ್ಲ. ರಾತ್ರಿ 10:30 ರಿಂದ 11 ಗಂಟೆ ನಡುವೆ ಕೊಲೆ ನಡೆದಿದೆ. ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಕೈಗೊಂಡಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸ್ ಆಯುಕ್ತ ರಮಣಗುಪ್ತಾ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಕೊಲೆ ಸುದ್ದಿ ನಗರದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಇದನ್ನೂ ಓದಿ: ವಿಜಯಪುರದಲ್ಲಿ ಹಿಟ್ & ರನ್ ಪ್ರಕರಣ: ಅತ್ತೆ-ಅಳಿಯ ಸಾವು, ಇಬ್ಬರು ಮಕ್ಕಳಿಗೆ ಗಾಯ
ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೊಲೆ: ಬುಧವಾರ ರಾತ್ರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಬರ್ಬರ ಹತ್ಯೆಯಾಗಿತ್ತು. ಕೊಲೆಯಾದ ವ್ಯಕ್ತಿಯನ್ನು ರವಿ ಅಲಿಯಾಸ್ ಮತ್ತಿ ರವಿ (42) ಎಂದು ಗುರುತಿಸಲಾಗಿತ್ತು. ಲಗ್ಗೆರೆ ಬಳಿಯ ಚೌಡೇಶ್ವರಿ ನಗರದಲ್ಲಿ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ಕೊಲೆ ನಡೆದಿದ್ದು, ಬೈಕ್ಗಳಲ್ಲಿ ಬಂದ ಐವರು ರವಿಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ಈಗಾಗಲೇ ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.