ಧಾರವಾಡ: ಬಿಆರ್ಟಿಎಸ್ ಚಿಗರಿ ಹುಬ್ಬಳ್ಳಿ-ಧಾರವಾಡಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಅವಾಂತರ ಸೃಷ್ಟಿಸಿಕೊಳ್ಳುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಂದು ಮತ್ತೊಂದು ಅವಾಂತರ ಸೃಷ್ಟಿ ಮಾಡಿಕೊಂಡಿದೆ.
ಹುಬ್ಬಳ್ಳಿ-ಧಾರವಾಡ ಮಾರ್ಗ ಮಧ್ಯೆ ಇರುವ ಎಪಿಎಂಸಿ ಮೂರನೇ ಗೇಟಿನ ಹತ್ತಿರ ರಸ್ತೆ ದಾಟುವಾಗ ಬಿಆರ್ಟಿಎಸ್ ಚಿಗರಿ ಬಸ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಬೈಕ್ ಸವಾರನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡಿರುವ ವ್ಯಕ್ತಿಯನ್ನು ಪಾಂಡು ಪೂಜಾರ ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಕೆಲ ಹೊತ್ತು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಚಿಗರಿ ಬಸ್ನಿಂದ ಈಗಾಗಲೇ ಹಲವು ರಸ್ತೆ ಅಪಘಾತಗಳಾಗಿದ್ದು, ರಸ್ತೆ ದಾಟುವಾಗ ಇಂತಹ ಅವಾಂತರ ಸೃಷ್ಟಿಯಾಗದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.