ಧಾರವಾಡ: ರಾಜ್ಯದ ಹಲವೆಡೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಬ್ಯಾನರ್, ಫ್ಲೆಕ್ಸ್ ಗಲಾಟೆಗಳು ಮುಂದುವರೆದಿದೆ. ಧಾರವಾಡದ ಮುರುಘಾ ಮಠಕ್ಕೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ ಭೇಟಿ ಹಿನ್ನೆಲೆಯಲ್ಲಿ ವೀರ ಸಾವರ್ಕರ್ ಬ್ಯಾನರ್ ಅಳವಡಿಸಿ, ಕಪ್ಪುಪಟ್ಟಿ ಸ್ವಾಗತ ಕೋರಲು ಸಜ್ಜಾಗಿದ್ದ ಬಿಜೆಪಿ ಹಾಗೂ ಬಜರಂಗದಳ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯಿಂದ ಧಾರವಾಡದ ಮುರುಘಾ ಮಠಕ್ಕೆ ಎಂ.ಬಿ. ಪಾಟೀಲ ಅವರು ಇಂದು ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳಿಂದ ಬ್ಯಾನರ್ ಹಾಕಲಾಗಿದ್ದು, ಅದರ ಪಕ್ಕದಲ್ಲಿಯೇ ಸಾವರ್ಕರ್ ಇರುವ ಬ್ಯಾನರ್ ಅಳವಡಿಸಿದ್ದರು. ಪೊಲೀಸ್ ಬ್ಯಾರಿಕೇಡ್ಗೆ ಸಾವರ್ಕರ್ ಬ್ಯಾನರ್ ಕಟ್ಟಲಾಗಿತ್ತು. ಎಂ ಬಿ ಪಾಟೀಲ ವಿರುದ್ಧ ಧಿಕ್ಕಾರ ಕೂಗಲು ಮುಂದಾಗಿದ್ದ ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ.
ಶುಕ್ರವಾರ ಕಾಂಗ್ರೆಸ್ ಪ್ರತಿಭಟನೆ ವೇಳೆ ಸಾವರ್ಕರ್ ಅವರ ಭಾವಚಿತ್ರ ದಹಿಸಿದ ಪ್ರಕರಣದಲ್ಲಿ 12 ಮಂದಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಬ್ಯಾನರ್ ಸಂಘರ್ಷ ಮುಂದುವರೆದಿದೆ. ಇಂದು ಬೆಳಗ್ಗೆ ಹುಬ್ಬಳ್ಳಿಯಲ್ಲಿ ಕೂಡ ಎಂ ಬಿ ಪಾಟೀಲ್ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಧಾರವಾಡ ಜಿಲ್ಲಾಧ್ಯಕ್ಷ ಸಂಜೀವ್ ಕಪಾಟಕರ್ ಸೇರಿದಂತೆ 50ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಸಾವರ್ಕರ್ ಫೋಟೋ ಸುಟ್ಟ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲು