ಹುಬ್ಬಳ್ಳಿ: ಸೆ.3 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ, ನಾನು ಏನನ್ನು ಮಾತನಾಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಭೇಟಿಗೆ ಪ್ರತಿಪಕ್ಷಗಳ ನಿಯೋಗ ಮುಂದಾಗಿರುವ ಕುರಿತು ಹುಬ್ಬಳ್ಳಿಯ ತಮ್ಮ ನಿವಾಸದ ಎದುರು ಪ್ರತಿಕ್ರಿಯಿಸಿದ ಅವರು, ಆ ವಿಷಯ ಸದ್ಯಕ್ಕೆ ನ್ಯಾಯಾಲಯದಲ್ಲಿದೆ, ಪ್ರಧಾನಿ ಭೇಟಿಗೆ ಪ್ರತಿಪಕ್ಷದವರಿಗೆ ಅವಕಾಶವಿದೆ, ಹಾಗಾಗಿ ಅವರು ಭೇಟಿ ಮಾಡಲಿ ಎಂದರು.
ಇನ್ನು ಗಣೇಶ ಚತುರ್ಥಿ ಆಚರಣೆ ಮಾಡುವ ಕುರಿತು ಬಸನಗೌಡ ಪಾಟೀಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಎಂ, ಈ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅವರನ್ನೇ ಕೇಳಿ ಎಂದು ತಿಳಿಸಿದರು.
ಸಿಎಂ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ:
ಹುಬ್ಬಳ್ಳಿಯ ಸಿಎಂ ನಿವಾಸದಲ್ಲಿ ರಕ್ಷಾ ಬಂಧನ ಸಂಭ್ರಮ ಕಳೆಗಟ್ಟಿತ್ತು. ಬಸವರಾಜ ಬೊಮ್ಮಾಯಿಗೆ ಸಹೋದರಿಯರು ರಾಕಿ ಕಟ್ಟಿದರು. ನಂತರ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಸಹೋದರಿಯರು ಕೂಡ ರಾಖಿ ಕಟ್ಟಿ, ರಕ್ಷಾ ಬಂಧನದ ಶುಭಾಶಯ ತಿಳಿಸಿದರು. ನಂತರ ಸಿಎಂ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.