ಧಾರವಾಡ: ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆ ರಾಜ್ಯ ಸರ್ಕಾರ ನಾಳೆಯಿಂದ ಬಸ್ ಸಂಚಾರಕ್ಕೆ ಅನುಮತಿ ನೀಡಿದ್ದು, ಅಂತರ್ ಜಿಲ್ಲಾ ಪ್ರಯಾಣಿಕರ ಬಗ್ಗೆ ಜಾಗೃತಿ ವಹಿಸಿ, ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಆರ್ಥಿಕ ಚಟುವಟಿಕೆಗಳಿಗೆ ಪುನರ್ ಚಾಲನೆ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಕ್ರಮಗಳನ್ನು ಹಂತ ಹಂತವಾಗಿ ತೆಗೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಶೇ. 45 ರಷ್ಟು ಮತ್ತು ರಾಜ್ಯದಲ್ಲಿ ಶೇ.40 ರಷ್ಟು ಕೈಗಾರಿಕೆಗಳು ಈಗಾಗಲೇ ಆರಂಭವಾಗಿವೆ. ಮುಂದಿನ ದಿನಗಳಲ್ಲಿ ಎಲ್ಲ ಕೈಗಾರಿಕೆಗಳು ಪುನರಾರಂಭಗೊಳ್ಳುವ ಭರವಸೆ ಇದೆ ಎಂದರು.
ರಾಜ್ಯ ಸರ್ಕಾರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಾರರಿಗೆ ವಿವಿಧ ರೀತಿಯ ಸಬ್ಸಿಡಿ ಘೊಷಿಸಿದೆ. ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗಲು ಸರ್ಕಾರ ಪ್ರತಿ ರೈತನಿಗೆ ರೂ.5 ಸಾವಿರ ಸಬ್ಸಿಡಿ ನೀಡಲು ತೀರ್ಮಾನಿಸಿದೆ. ಹೂವು ಬೆಳೆಗಾರರಿಗೆ ಪ್ರತಿ ಎಕರೆಗೆ ರೂ. 10 ಸಾವಿರ ಅಥವಾ ಒಂದು ಹೆಕ್ಟೆರಿಗೆ 25 ಸಾವಿರ ಸಬ್ಸಿಡಿ ನೀಡಲು ಸರ್ಕಾರ ತೀರ್ಮಾನಿಸಿದೆ. ಮೇ 25 ರೊಳಗೆ ಅರ್ಹ ರೈತರಿಂದ ತೋಟಗಾರಿಕೆ ಇಲಾಖೆ ಅರ್ಜಿ ಸ್ವೀಕರಿಸಿ, ಸಬ್ಸಿಡಿ ಹಣ ಅವರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕು. ಸಾರಿಗೆ ಇಲಾಖೆಯ ನಿಯಮಗಳ ಅನುಸಾರ ಅರ್ಹರಾಗಿರುವ ಪ್ರತಿ ಆಟೋ ರೀಕ್ಷಾ ಚಾಲಕರಿಗೆ ರೂ.5 ಸಾವಿರ ಸಹಾಯಧನ ಪ್ರಕಟಿಸಿಲಾಗಿದ್ದು, ಆರ್.ಟಿ.ಓ. ಅಧಿಕಾರಿಗಳು ಸೇವಾ ಸಿಂಧು ಆ್ಯಪ್ ಮೂಲಕ ಚಾಲಕರು ಅರ್ಜಿ ಸಲ್ಲಿಸುವಂತೆ ಮಾಹಿತಿ ನೀಡಿ, ಸರ್ಕಾರದ ಸೌಲಭ್ಯ ಅವರಿಗೆ ತಲುಪುವಂತೆ ಮಾಡಬೇಕು ಎಂದರು.
ಇನ್ನು ರೈತರ ಮೆಕ್ಕೆಜೋಳ ಖರೀದಿಗೆ ಕೆಎಂಎಫ್ ಪ್ರಯತ್ನ ಮಾಡಿತ್ತು. ಅದು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಆಗಲಿಲ್ಲ. ಹೀಗಾಗಿ ಈಗ ಸರ್ಕಾರಕ್ಕೆ ಮೆಕ್ಕೆಜೋಳ ಖರೀದಿ ಮಾಡಲು ಆಗುವುದಿಲ್ಲ ಎಂದು 5 ಸಾವಿರ ರೂ. ಸಬ್ಸಿಡಿ ಘೋಷಿಸಿದ್ದೇವೆ. ಇನ್ನು ಖರೀದಿ ಕೇಂದ್ರ ಇರುವುದಿಲ್ಲ. ರೈತರು ತಮಗೆ ಯಾರಿಗೆ ಬೇಕೋ ಅವರಿಗೆ ಮಾರಾಟ ಮಾಡಬಹುದು. ನಮ್ಮೂರಿಗೆ ಎಂಎಲ್ಐಎಲ್ ಮಳಿಗೆ ಕೊಡಿ ಎಂದು ಒಬ್ಬರು ಕೇಳಿಕೊಂಡು ಬಂದಿದ್ದರು. ನಾನು ಗ್ರಾ.ಪಂ ಅಧ್ಯಕ್ಷ, ಊರ ಹಿರಿಯರ ಒಪ್ಪಿಗೆ ತಗೊಂಡು ಬಾ ಎಂದು ಹೇಳಿ ಕಳುಹಿಸಿದ್ದೆ. ಅದಕ್ಕೆ ಜನರ ವಿರೋಧ ಇದ್ದರೇ ಇರೋ ಮಳಿಗೆಗಳನ್ನು ನಾವು ಬಂದ್ ಮಾಡಿಸುತ್ತೇವೆ ಎಂದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದ್ದು, ರೈತರು ಭೂಮಿ ಉಳಿಮೆ, ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ರೈತರಿಗೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ, ಸಕಾಲಕ್ಕೆ ಬೀಜ, ಗೊಬ್ಬರ ರೈತರಿಗೆ ತಲುಪುವಂತೆ ಕ್ರಮ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಜಿಲ್ಲೆಯಲ್ಲಿ 26 ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿದ್ದು, ಇದರಲ್ಲಿ 7 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 19 ಸಕ್ರಿಯ ಪ್ರಕರಣಗಳಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೂ ಸಹ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರೂ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಆಗುತ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಮೇ.18 ರ ವರೆಗೆ ಒಟ್ಟು 8,534 ಸ್ಯಾಂಪಲ್ ಸಂಗ್ರಹಿಸಿದ್ದು, ಅದರಲ್ಲಿ 7,315 ನೆಗೆಟಿವ್ ಆಗಿದ್ದು, 26 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 7 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದ 19 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು 1,193 ಜನರ ವರದಿ ಬರಬೇಕಿದೆ ಎಂದರು.
ವಿವಿಧ ರಾಜ್ಯಗಳಿಂದ ಕಾರ್ಮಿಕರು ಸೇರಿದಂತೆ ಮೇ 18 ರವರೆಗೆ 1,180 ಜನ ಪ್ರಯಾಣಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಎಲ್ಲರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲ ಕಾಲಕ್ಕೆ ನೀಡುವ ನಿರ್ದೇಶನಗಳನ್ನು ಅಳವಡಿಸಿಕೊಂಡು ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.