ಮಂಡ್ಯ: ಸಿಎಂ ಜಿಲ್ಲಾ ಪ್ರವಾಸಕ್ಕೂ ಮೊದಲೇ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ವಿರುದ್ಧ ದಾಳಿ ಆರಂಭಿಸಿದ್ದಾರೆ.
ಹೋರಾಟಗಾರರಿಂದ ಸಿಎಂಗೆ ಕಪ್ಪು ಬಾವುಟ ಪ್ರದರ್ಶನದ ಮಾಹಿತಿ ತಿಳಿದು ಅಧಿಕಾರಿಗಳು ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ನಿಷೇಧಿತ ಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಮೇಲೆ ದಾಳಿ ಮಾಡಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾಂಡವಪುರ ಉಪ ವಿಭಾಗಾಧಿಕಾರಿ ಶಿವಮೂರ್ತಿ, ಹಿರಿಯ ಭೂ ವಿಜ್ಞಾನಿ ಟಿ.ವಿ.ಪುಷ್ಪ, ತಹಶೀಲ್ದಾರ್ ಪ್ರಮೋದ್, ಭೂ ವಿಜ್ಞಾನಿ ಡಾ. ಡಿ.ನಟಶೇಖರ್ ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ದಾಳಿ ಮಾಡಿ ಗಣಿಗಾರಿಕೆಯಲ್ಲಿ ತೊಡಗಿದ್ದ ಮೂವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಸಿಎಂ ಯಡಿಯೂರಪ್ಪ ಆಗಸ್ಟ್ 21ರಂದು ಕೆಆರ್‌ಎಸ್‌ಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ರೈತ ಮುಖಂಡರು ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೋರಾಟ ಮಾಡಲು ನಿರ್ಧಾರ ಮಾಡಿದ್ದರು. ಜೊತೆಗೆ ಸಿಎಂ ಸ್ವಾಗತಕ್ಕೆ ಕಪ್ಪು ಬಾವುಟ ತೋರಿಸಲು ನಿರ್ಧಾರ ಮಾಡಿದ್ದರು. ಹೀಗಾಗಿ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಮೇಲೆ ದಾಳಿ ಮಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಎಸ್‌ಪಿ ದಾಳಿ ಮಾಡಿ ಟ್ರಕ್‌ಗಳನ್ನು ವಶಕ್ಕೆ ಪಡೆದಿದ್ದರು. ಆದರೂ ಅಕ್ರಮ ಗಣಿಗಾರಿಕೆ ನಿಂತಿರಲಿಲ್ಲ. ರಾತ್ರಿ ವೇಳೆ ಸ್ಫೋಟಕ ಬಳಸಿ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿದೆ. ಆದರೆ ಸಿಎಂ ಪ್ರವಾಸ ಹಿನ್ನೆಲೆ ಹೋರಾಟಗಾರರನ್ನು ತಣ್ಣಗಾಗಿಸಲು ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.