ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಇಡೀ ದೇಶದ ಗಮನ ಸೆಳೆಯುತ್ತಿರೋ ಕ್ಷೇತ್ರವಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿಯಿಂದ ನಿರಂತರವಾಗಿ ಗೆದ್ದು ಬೀಗುತ್ತಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬದಲಾದ ರಾಜಕೀಯ ವಿದ್ಯಮಾನಗಳಿಂದ ಬಿಜೆಪಿ ತೊರೆದು ಕಾಂಗ್ರೆಸ್ ತೆಕ್ಕೆಗೆ ಬೀಳುತ್ತಿದಂತೆ ಬಿಜೆಪಿ ಅಗ್ರ ನಾಯಕರು ಕ್ಷೇತ್ರವನ್ನು ಮತ್ತೆ ಮರಳಿ ಪಡೆಯಲು ರಣ ತಂತ್ರ ರೂಪಿಸಿದ್ದಾರೆ.
ಆದರೆ, ಅವರ ರಣತಂತ್ರಕ್ಕೆ ಜಾತಿವಾರು ಲೆಕ್ಕಾಚಾರ ಉಲ್ಟಾ ಹೊಡೆಯುವ ಲಕ್ಷಣಗಳು ಗೋಚರಿಸುತ್ತಿವೆ. ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿಯ ಮಹೇಶ ಟೆಂಗಿನಕಾಯಿ ನಡುವೆ ತೀವ್ರ ಹಣಾಹಣಿ ಇದೆ. ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಜಾತಿವಾರು ಮತಗಳ ಆಧಾರದ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ಮಾಡಲಾಗುತ್ತಿದ್ದು, ಯಾರು, ಯಾವ ಜಾತಿಯ ಮತಗಳನ್ನು ಹೆಚ್ಚು ಸೆಳೆದಿದ್ದಾರೆ ಎಂದು ಬೆಂಬಲಿಗರು ಲೆಕ್ಕಾಚಾರ ಮಾಡುತ್ತಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಮುಖಂಡರಿಂದ ಗೆಲುವಿನ ಸ್ಟ್ರ್ಯಾಟಜಿ ಹಾಕಲಾಗುತ್ತಿದ್ದು, ಸೆಂಟ್ರಲ್ ಕ್ಷೇತ್ರದಲ್ಲಿ ಶೇ 64.14 ರಷ್ಟು ಮತದಾನವಾಗಿದೆ. 1,59,873 ಮತದಾರರು ಹಕ್ಕು ಚಲಾವಣೆ ಮಾಡಿದ್ದಾರೆ. ಕ್ಷೇತ್ರದಲ್ಲಿ 70 ಸಾವಿರ ಲಿಂಗಾಯತ, 35 ಸಾವಿರ ಸಾವಜಿ, 40 ಸಾವಿರ ಮುಸ್ಲಿಂ, 25 ಸಾವಿರ ಕ್ರೈಸ್ತ, 20 ಸಾವಿರ ದಲಿತ, 12 ಸಾವಿರ ಮರಾಠಾ, 10 ಸಾವಿರ ಮಾರ್ವಾಡಿ, 6 ಸಾವಿರ ಬ್ರಾಹ್ಮಣ, 5 ಸಾವಿರ ಕುರುಬ ಮತದಾರರು ಸೆಂಟ್ರಲ್ ಕ್ಷೇತ್ರದಲ್ಲಿದ್ದಾರೆ.
ಬಿಜೆಪಿ, ಕಾಂಗ್ರೆಸ್ ನೇರಾನೇರ ಫೈಟ್ ಹಿನ್ನೆಲೆಯಲ್ಲಿ ಗೆಲ್ಲಲು ಬೇಕಾಗಿರುವುದು 80 ಸಾವಿರ ಮತಗಳು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಬಳಿ ಸಾಂಪ್ರದಾಯಿಕ 55 ಸಾವಿರ ಮತಗಳು ಇವೆ. ಹೆಚ್ಚುವರಿ 25 ಸಾವಿರ ಮತಗಳಿಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ನಡುವೆ ಹಗ್ಗಜಗ್ಗಾಟವಿದೆ. ಕನಿಷ್ಠ ಶೇ 20ರಷ್ಟು ಲಿಂಗಾಯತ, ಸಾವಜಿ, ಮರಾಠಾ, ಮಾರ್ವಾಡಿ ಮತಗಳನ್ನ ಸೆಳೆದ್ರೆ ಜಗದೀಶ್ ಶೆಟ್ಟರ್ ಗೆಲವು ಖಚಿತವಾಗಲಿದೆ.
ಬಿಜೆಪಿಗೆ ಗೆಲ್ಲಲು ಲಿಂಗಾಯತ, ಸಾವಜಿ, ಮರಾಠಾ, ಮಾರ್ವಾಡಿ ಮತಗಳು ಗಟ್ಟಿಯಾಗಿ ಬರಬೇಕು. ಶೇ 20ರಷ್ಟು ಓಬಿಸಿ ಮತಗಳನ್ನು ಸೆಳೆದರೆ ಮಾತ್ರ ಬಿಜೆಪಿಗೆ ಗೆಲ್ಲುವ ಚಾನ್ಸ್ ಇದೆ. ಓಟಿಂಗ್ ಪರ್ಸೆಂಟ್ ಕಡಿಮೆಯಾಗಿದ್ದರಿಂದ ಬಿಜೆಪಿ ಕಂಗೆಟ್ಟಿದೆ. ಬಿಜೆಪಿ ಪರವಾದ ಓಟ್‌ಗಳು ಸಂಪೂರ್ಣ ಚಲಾವಣೆಯಾಗಿಲ್ಲ ಅನ್ನೋ ಆತಂಕ ಕಾಡುತ್ತಿದೆ.
ಮತದಾನ ಮುಗಿಯುತ್ತಿದ್ದಂತೆ ಜೋರಾದ ಬೆಟ್ಟಿಂಗ್ ಭರಾಟೆ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಜಿದ್ದಾಜಿದ್ದಿ ಇದೆ. ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಅವರ ಬೆಂಬಲಿಗರು ಕೋಟ್ಯಂತರ ರೂಪಾಯಿ ಬೆಟ್ಟಿಂಗ್ ಇಟ್ಟಿದ್ದಾರೆ. ಸೈಟ್ ಮತ್ತು ಚಿನ್ನದ ರೂಪದಲ್ಲೂ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. 5 ಸಾವಿರದಿಂದ 1 ಕೋಟಿವರೆಗೂ ಬೆಟ್ಟಿಂಗ್ ಭರಾಟೆ ನಡೆದಿದೆ ಎನ್ನಲಾಗಿದೆ. ಜಗದೀಶ್ ಶೆಟ್ಟರ್ ಗೆಲ್ತಾರಾ ಇಲ್ಲಾ ಸೋಲ್ತಾರಾ ಅಂತಾ ಬೆಂಬಲಿಗರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಗೆಲುವು ಸೋಲಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿ ನಡೆದಿದೆ.
ಇದನ್ನೂ ಓದಿ: 2023ರ ಎಕ್ಸಿಟ್ ಪೋಲ್ಸ್ ರಾಜಕೀಯ ಭವಿಷ್ಯ ನಿಜವಾಗುತ್ತಾ? 2018ರಲ್ಲಿ ಸಮೀಕ್ಷೆಗಳು ಏನ್ ಹೇಳಿದ್ದವು?