ಹುಬ್ಬಳ್ಳಿ: ಏಪ್ರಿಲ್ 9ರಂದು ಕವಚ ಚಲನಚಿತ್ರದ ತಂಡದೊಂದಿಗೆ ಪದ್ಮಾ ಹಾಗೂ ಅಪ್ಸರಾ ಚಿತ್ರಮಂದಿರಗಳಲ್ಲಿ ಅಭಿಮಾನಿಗಳ ಜೊತೆ ನಾಯಕ ನಟ ಶಿವರಾಜ್ಕುಮಾರ್ 'ಕವಚ' ಸಿನಿಮಾ ವೀಕ್ಷಣೆ ಮಾಡಲಿದ್ದಾರೆ ಎಂದು ಡಾ. ರಾಜ್ಕುಮಾರ್ ಅಭಿಮಾನಿಗಳ ಬಳಗ ಸಂಘದ ಅಧ್ಯಕ್ಷ ಶಿವಾನಂದ ಮುತ್ತಣ್ಣನವರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಏ.9ರಂದು ಮಧ್ಯಾಹ್ನ 12ಕ್ಕೆ ಶಿವರಾಜ್ಕುಮಾರ್ ಆಗಮಿಸಿ ಕಿತ್ತೂರು ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಅಭಿಮಾನಿಗಳ ಜೊತೆ ಮೆರವಣಿಗೆಯೊಂದಿಗೆ ಚಿತ್ರ ಮಂದಿರಕ್ಕೆ ತೆರಳಿ ಚಿತ್ರ ವೀಕ್ಷಣೆ ಮಾಡಲಿದ್ದಾರೆ.
ಅಂದು ಕವಚ ಚಿತ್ರದ ನಿರ್ಮಾಪಕ ಶ್ರೀಕಾಂತ್, ಸುಧೀರ, ನಟ ವಶಿಷ್ಠ ಸಿಂಹ, ವಿಆರ್ಎಸ್ ವಾಸು ಮುಂತಾದವರು ಆಗಮಿಸಲಿದ್ದಾರೆ ಎಂದರು. ಇದೇ ವೇಳೆ ಉತ್ತರ ಕರ್ನಾಟಕ ಕಲಾವಿದರಿಗೆ ಸೂಕ್ತ ಸ್ಥಾನ ಮಾನ ಚಿತ್ರರಂಗದಲ್ಲಿ ಸಿಗುತ್ತಿಲ್ಲ. ಆದ್ದರಿಂದ ಶೀಘ್ರವೇ ಉತ್ತರ ಕರ್ನಾಟಕ ಕಲಾವಿದರ ಸಂಘ ರಚನೆ ಮಾಡಲಾಗುವುದು ಎಂದರು.